Tuesday, 20 December 2011

ಮೂಲಭೂತ ಶಿಕ್ಷಣ


ಆಸ್ಟ್ರೇಲಿಯಾದಲ್ಲಿರಬೇಕಾದರೆ ಕಂಡ ಒಂದು ದೃಶ್ಯ ಮನಸ್ಸಿನಲ್ಲಿ ಹಾಗೇ ಅಚ್ಚೊತ್ತಿದೆ. ಬೆಂಗಳೂರಿನ ರಸ್ತೆಗಳಲ್ಲಿ ಉಗುಳುವವರನ್ನು, ಎಲ್ಲೆಂದರಲ್ಲಿ ಕಸ ಬಿಸಾಡುವವರನ್ನು, ಮೂತ್ರ ವಿಸರ್ಜಿಸುವವರನ್ನು ಕಂಡಾಗ ಈ ದೃಶ್ಯ ಪದೇ ಪದೇ ನೆನಪಾಗುತ್ತದೆ.

ಒಂದು ಭಾನುವಾರ ಸಂಜೆ ನಾವಿದ್ದ apartment ಬಳಿ ಇರುವ ಉದ್ಯಾನವನದಲ್ಲಿ walking ಹೊರಟಿದ್ದೆ - ಎಲ್ಲೊ ಅಮಾವಾಸ್ಯೆ-ಹುಣ್ಣಿಮೆಗೆ ಆರೋಗ್ಯದ ಕಾಳಜಿ ಉಂಟಾಗಿ ಒಂದು ಅರ್ಧ ಗಂಟೆ walking ಹೋಗುತ್ತಿದ್ದೆ!! ಆ ದಿನ, ಅದೇ ಸಮಯದಲ್ಲಿ ಒಂದು ಪುಟ್ಟ ಮಗು, 3 - 4 ವಯಸ್ಸಿರಬಹುದು, ತನ್ನ ತಾಯಿಯ ಜೊತೆಯಲ್ಲಿ ಅದೇ ಉದ್ಯಾನವನದ ಹುಲ್ಲು ಹಾಸಿನ ಮೇಲೆ ಕುಳಿತ್ತಿತ್ತು. ಕೈಯಲ್ಲಿ ಒಂದು ತಿಂಡಿಯ ಪೊಟ್ಟಣ, ಮುಖದಲ್ಲಿ ಸಂತೃಪ್ತಿಯ ನಗೆ!! ನಾನು ಒಂದೆರಡು ಸುತ್ತು ಹಾಕಿ ಬರುವುದರಲ್ಲಿ ತಿಂಡಿ ತಿಂದು ಮುಗಿಸಿದ ಮಗು ಖಾಲಿ ಪೊಟ್ಟಣವನ್ನು ಅಲ್ಲೇ ನೆಲದ ಮೇಲೆ ಬಿಸಾಡಿತು. ಅದನ್ನು ನೋಡಿದ ತಾಯಿ ಮಗುವಿಗೆ ಒಂದು ಏಟು ಕೊಟ್ಟು, ಮಗುವಿನ ಕೈಯಲ್ಲೇ ಪೊಟ್ಟಣವನ್ನು ಎತ್ತಿಸಿ ಅಲ್ಲೇ ಬದಿಯಲ್ಲಿ ಇದ್ದ ಕಸದ ಬುಟ್ಟಿಗೆ ಹಾಕಿಸಿದಳು! ಇದು practical ಶಿಕ್ಷಣ!!

ಎಳೇ ವಯಸ್ಸಿನಲ್ಲೇ ಮಕ್ಕಳಿಗೆ ಸ್ವಚ್ಛತೆಯ ಪಾಠ ಕಲಿಸಿದರೆ ಮುಂದೆ ಅದೇ ರೂಢಿಯಾಗುತ್ತದೆ. ಇಂತ ಚಿಕ್ಕ ಪುಟ್ಟ ಪಾಠಗಳೇ ಉತ್ತಮ ಸಮಾಜ ನಿರ್ಮಾಣಕ್ಕೆ ಅಡಿಪಾಯ ಹಾಗು ಇದು ಚಿಕ್ಕ ಮಗುವಿದ್ದಾಗಲೇ ಮನೆಯಿಂದಲೇ ಶುರುವಾಗಬೇಕು. ಅದಕ್ಕೆ ಹಿರಿಯರು ಅಂದದ್ದು - ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು!!



Tuesday, 15 November 2011

ಪುಸ್ತಕ ಪರಿಚಯ - "ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್"

(google images)


ಪೂರ್ಣಚಂದ್ರ ತೇಜಸ್ವಿಯವರು ತಮ್ಮ ಅಂಡಮಾನ್ ಪ್ರವಾಸದ ಅನುಭವವನ್ನು ರಸವತ್ತಾಗಿ ವಿವರಿಸುವ ಜೊತೆಗೆ ಅಲ್ಲಿನ ಜೀವ ವೈವಿಧ್ಯದ ಪರಿಚಯವನ್ನು ನೀಡಿದ್ದಾರೆ. ಬರೀ ಮೋಜಿನ ಪ್ರವಾಸ ಮಾಡದೆ, ಅಲ್ಲಿನ ಪರಿಸರ, ಜೀವ ವೈವಿಧ್ಯ ಹಾಗು ಸಂಸ್ಕೃತಿಯ  ಸೂಕ್ಷ್ಮತೆ ಅರಿಯಲು ಪ್ರಯತ್ನಿಸಿದ್ದಾರೆ.

ಪುಸ್ತಕದ ಎರಡನೆ ಭಾಗ ಜಗತ್ತಿನ ಉದ್ದನೆಯ ನದಿ "ನೈಲ್" ಬಗ್ಗೆ, ಅದರ ಉಗಮ ಸ್ಥಾನದ ಅನ್ವೇಷಣೆಯ ಬಗ್ಗೆ ಪರಿಚಯಿಸುತ್ತದೆ. ಅದರ ಉಗಮ ಸ್ಥಾನ ತಿಳಿಯಲು ಅನೇಕರು ಪಟ್ಟ ಪಾಡನ್ನು, ಮಾಡಿದ ಸಾಹಸವನ್ನು ಚೆನ್ನಾಗಿ ವಿವರಿಸಿದ್ದಾರೆ.

ಲೇಖಕರು - ಪೂರ್ಣಚಂದ್ರ ತೇಜಸ್ವಿ
ವಿತರಕು - ಪುಸ್ತಕ ಪ್ರಕಾಶನ

Tuesday, 1 November 2011

ಚೀಂವ್ ಚೀಂವ್ ನಿನಾದ!!

"ಚೀಂವ್ ಚೀಂವ್" - ನಿರುಪದ್ರವಿ, ಪುಟಾಣಿ ಗುಬ್ಬಚ್ಚಿಯ ಕೂಗು!!

ಈ ಶಬ್ದ ಕಿವಿಗೆ ಬೀಳದೆ ಅದೆಷ್ಟು ವರ್ಷಗಳಾಗಿತ್ತೋ? ಕಾರ್ಕಳವೆಂಬ ಸಣ್ಣ ಊರನ್ನು ಬಿಟ್ಟು ಬೆಂಗಳೂರು ಮಹಾನಗರಿಗೆ ಬಂದದ್ದು ೨೦೦೦ನೇ ಇಸವಿಯಲ್ಲಿ. ಆಗ ನಾವಿದ್ದ ಶ್ರೀನಗರದಲ್ಲಿ ಎಲ್ಲೊ ಒಂದೊಂದು ಸಲ ಇವು ಕಾಣಸಿಗುತ್ತಿದ್ದವು. ನಂತರದ ಕೆಲವೇ ದಿನಗಳಲ್ಲಿ ಸುಳಿವೇ ಇಲ್ಲದಂತೆ ಮಾಯವಾದವು!

ಈಗ ವರ್ಷದ ಕೆಳಗೆ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಹೋದಾಗ ಇವು ಮತ್ತೆ ಕಣ್ಣಿಗೆ ಬಿದ್ದವು. ಪಕ್ಕದಲ್ಲಿರುವ ಉಪಹಾರಗೃಹದ ಮೇಜಿನ ಬಳಿ ಬಿದ್ದಿದ್ದಂತಹ ಚೂರು-ಪಾರು ತಿಂಡಿಗೆ ಗುಂಪು ಗುಂಪಾಗಿ ಬರುತ್ತಿದ್ದವು. ಕಾಂಕ್ರೀಟ್ ಕಾಡಿನಿಂದ ಸ್ವಲ್ಪ ದೂರವಿರುವ ಕಾರಣ ಗುಬ್ಬಿಗಳು ಇನ್ನು ಅಲ್ಲಿ ಉಳಿದುಕೊಂಡಿವೆ!!

ಈ ವರ್ಷದ ಬೇಸಿಗೆಯಲ್ಲಿ ನಮ್ಮ ಕುಟುಂಬ ಬೆಂಗಳೂರಿನ ಶ್ರೀನಗರದಿಂದ ಕೆಂಗೇರಿ ಉಪನಗರದ ಬಳಿ ಇರುವ ವಿಶ್ವೇಶ್ವರಯ್ಯ ಬಡಾವಣೆಗೆ ಮನೆ ಬದಲಾಯಿಸಿದೆವು. ಆಗ ಪುನಃ ಕಂಡದ್ದು-ಕೇಳಿದ್ದು, ಗುಬ್ಬಿಗಳು ಹಾಗು ಅದರ "ಚೀಂವ್ ಚೀಂವ್"!! ಇದು ಹೊಸ ಬಡಾವಣೆಯಾದ್ದರಿಂದ ಮನೆಗಳು ಸ್ವಲ್ಪ ಕಡಿಮೆ. ಸುತ್ತಮುತ್ತ ಕೆಲವು ತರಕಾರಿ ತೋಟಗಳು ಹಾಗು ಹಣ್ಣು-ಹುಳಗಳಿರುವ ಪೊದೆಗಳು ಸಾಕಷ್ಟಿವೆ.

ನಶಿಸುತ್ತಿರುವ ಇವುಗಳ ರಕ್ಷಣೆಗೆ ನನ್ನಿಂದಾಗುವ ಅಲ್ಪ ಸಹಾಯ ಮಾಡಲು ಯೋಚಿಸಿದೆ. ಮನೆಯ ಆವರಣದ ಗೋಡೆಯ ಮೇಲೆ ಹಾಗು ಅಂಗಳದಲ್ಲಿ ಅಕ್ಕಿ ಕಾಳುಗಳನ್ನು ಇಡಲು ಪ್ರಾರಂಭಿಸಿದೆ. ತುಂಬಾ ಸೂಕ್ಷ್ಮ ಹಾಗು ಜಾಗರೂಕ ಜೀವಿಯಾದ ಇವುಗಳು, ಪ್ರಾಯಶಃ ಮನುಷ್ಯ ಭಯ ಅಥವಾ ಇನ್ನಾವುದೋ ಕಾರಣದಿಂದ ಮೊದಲ ಒಂದು ತಿಂಗಳು ಮನೆಯ ಆವರಣದ ಒಳಗೆ ಒಂದೂ ಸುಳಿಯಲಿಲ್ಲ. ನಂತರದ ದಿನಗಳಲ್ಲಿ ೨-೩ ಗುಬ್ಬಿಗಳು ಕಾಳನ್ನು ತಿನ್ನುವ ಧೈರ್ಯತೋರಿದವು. ಇದರಿಂದ ಉತ್ತೇಜಿತನಾಗಿ ಇನ್ನೂ ಹೆಚ್ಚು ಕಾಳುಗಳನ್ನು ಇಡಲು ಶುರುವಿಟ್ಟೆ. ಈಗೀಗ ೧೦-೧೫ ಗುಬ್ಬಿಗಳ ದೊಡ್ಡ ಗುಂಪು ಕಾಳನ್ನು ತಿನ್ನಲು ಬರುತ್ತಿವೆ. ಹಾಕಿದ ಕಾಳುಗಳನ್ನು ಒಂದೂ ಬಿಡದೆ ಸ್ವಾಹ ಮಾಡುತ್ತಿವೆ! ಬೆಳಗ್ಗಿನಿಂದ ಸಂಜೆಯವರಗೂ ಅಗ್ಗಾಗ್ಗ "ಚೀಂವ್ ಚೀಂವ್" ನಾದ ಕಿವಿಗೆ ಬೀಳುತ್ತಿರುತ್ತದೆ. ಮನೆಮಂದಿಗೆಲ್ಲ ಇದರಿಂದ ಸಖತ್ ಖುಷಿ. ಈಗ ಅಕ್ಕಿ ಕಾಳಿನ ಜೊತೆ ತಟ್ಟೆಯಲ್ಲಿ ನೀರು ಸಹ ಇಡುತ್ತಿದ್ದೇನೆ. ಸಂಜೆ ಕಚೇರಿಯಿಂದ ಹಿಂತಿರುಗಿದ ನಂತರ ಕಾಳುಗಳನ್ನು ಹಾಕುವುದು ನನ್ನ ದಿನಚರಿಯ ಒಂದು ಭಾಗವಾಗಿದೆ!

ನನ್ನ ಗಮನಕ್ಕೆ ಬಂದ ಒಂದು ವಿಷಯ. ೩ ರೀತಿಯ ಅಕ್ಕಿ ಕಾಳುಗಳನ್ನು ಹಾಕಿದ್ದೆ - ಅನ್ನಕ್ಕೆ ಬಳಸುವ ಸೋನಾಮಸೂರಿ, ಗಂಜಿಗೆ ಬಳಸುವ ಕೊಚ್ಚಿಲಕ್ಕಿ (ಕೆಂಪು ಅಕ್ಕಿ) ಹಾಗು ದೋಸೆಗೆ ಬಳಸುವ ಅಕ್ಕಿ. ಇವುಗಳಲ್ಲಿ ದೋಸೆಗೆ ಬಳಸುವ ಅಕ್ಕಿಯನ್ನು ಬೇಗನೆ ತಿಂದು ಮುಗಿಸುತ್ತವೆ. ಬಹುಶಃ ಈ ಮೂರರಲ್ಲಿ ದೋಸೆ ಅಕ್ಕಿ ಮೆದುವಿರುವ ಕಾರಣವೇನೂ!!

ಇವುಗಳ ಒಂದು ಫೋಟೋ ತೆಗೆಯಲು ಬಹಳ ದಿನಗಳಿಂದ ಪ್ರಯತ್ನಿಸುತ್ತಿದ್ದೆ. ಕ್ಯಾಮೆರಾ ಹಿಡಿದು ನಾ ಹೊರ ಬಂದರೆ ಸಾಕು, ಪುರ್ರನೆ ರೆಕ್ಕೆ ಬಡಿದು ಹಾರಿ ಬಿಡುತ್ತಿದ್ದವು. ಅಂತೂ ಇಂತೂ ಮರೆಯಲ್ಲಿ ಕಾದು ನಿಂತು ಕ್ಲಿಕ್ಕಿಸಿದ ಒಂದೆರಡು ಚಿತ್ರಗಳನ್ನು ಇಲ್ಲಿ ಕೊಟ್ಟಿದ್ದೇನೆ.





೨೦೧೦ರಲ್ಲಿ ಭಾರತೀಯ ಅಂಚೆ ಇಲಾಖೆ ಹೊರತಂದ "ಪಾರಿವಾಳ ಹಾಗು ಗುಬ್ಬಚ್ಚಿ" ಅಂಚೆಚೀಟಿ.



ಓದುಗರಲ್ಲಿ ಒಂದು ವಿನಂತಿ - ಬೆಂಗಳೂರಿನಂತಹ ಮಹಾನಗರದಲ್ಲಿ ಇಂದು ಪಕ್ಷಿಗಳು ಕಡಿಮೆಯಾಗಲು ಮುಖ್ಯ ಕಾರಣ ಅವುಗಳಿಗೆ ಸರಿಯಾದ ಆಹಾರ ದೊರಕದೆ ಇರುವುದು ಹಾಗು ಅವುಗಳ ವಾಸಸ್ಥಾನವಾದ ಗಿಡ-ಮರಗಳ ಮಾರಣಹೋಮ. ನಿಮ್ಮ ಮನೆಯ ಸುತ್ತ ಯಾವುದೇ ಪಕ್ಷಿಗಳು ಕಂಡರೂ, ಮನೆಯ ಅಂಗಳ ಹಾಗು ಛಾವಣಿಯಲ್ಲಿ ಅವುಗಳಿಗೆ ಸ್ವಲ್ಪ ಕಾಳು-ನೀರು ಇಟ್ಟು ಅವುಗಳ ರಕ್ಷಣೆಗೆ ನಿಮ್ಮ ಕಿಂಚಿತ್ ಕೊಡುಗೆ ನೀಡಿ. ನಿಮ್ಮ ಮನೆಯ ಸುತ್ತ ಸ್ಥಳಾವಕಾಶವಿದ್ದರೆ ಹೂವು ಹಣ್ಣು ಬಿಡುವಂತಹ ಗಿಡಗಳನ್ನು ಬೆಳೆಸಿ. ಆ ಗಿಡಗಳಲ್ಲಿ ದೊರೆಯುವ ಹುಳಗಳನ್ನು ತಿನ್ನಲಾದರು ಪಕ್ಷಿಗಳು ಬರುತ್ತವೆ.

ಪುಸ್ತಕ ಪರಿಚಯ - "ಮಹಾಬ್ರಾಹ್ಮಣ"

೫೫ನೇ ರಾಜ್ಯೋತ್ಸವದ ಶುಭಾಶಯಗಳು!



ಮಹಾಬ್ರಾಹ್ಮಣದ ಕಥೆ ಪ್ರಸಿದ್ಧರಾದ ವಸಿಷ್ಠ ವಿಶ್ವಾಮಿತ್ರರದು. ಕೌಶಿಕ ಮಹಾರಾಜ ವಸಿಷ್ಠರ ಬಳಿ ಇದ್ದ "ನಂದಿನಿ" ಎಂಬ ಹಸುವನ್ನು ಪಡೆಯಲು ಪ್ರಯತ್ನಿಸಿ, ವಿಫಲನಾಗಿ ಕೊನೆಗೆ ಅಹಂಭಾವವನ್ನು ತ್ಯಜಿಸಿ ವಿಶ್ವಕ್ಕೆ ಮಿತ್ರನಾದ "ವಿಶ್ವಾಮಿತ್ರ" ಬ್ರಹ್ಮರ್ಷಿಯಾಗಿ ಬದಲಾಗುವ ಕಥೆಯೇ ಮಹಾಬ್ರಾಹ್ಮಣ. ಹುಟ್ಟಿನಿಂದ ಕ್ಷತ್ರಿಯನಾದರೂ ಮುಂದೆ ಕರ್ಮದಿಂದ ಬ್ರಹ್ಮತ್ವವನ್ನು ಸಾಧಿಸಿದ ಬಗೆಯನ್ನು ಇಲ್ಲಿ ಚಿತ್ರಿಸಿದ್ದಾರೆ. ವಿಶ್ವಾಮಿತ್ರರ ಜೀವನದ ಬಗ್ಗೆ ಒಂದು ಒಳ್ಳೆ ಪರಿಚಯ ನೀಡಲಾಗಿದೆ.

ಲೇಖಕರು - ದೇವುಡು ನರಸಿಂಹಶಾಸ್ತ್ರಿ
ವಿತರಕರು - ಟಿ.ಎನ್.ಕೃಷ್ಣಯ್ಯಶೆಟ್ಟಿ ಅಂಡ್ ಸನ್, ಚಿಕ್ಕಪೇಟೆ, ಬೆಂಗಳೂರು

Tuesday, 25 October 2011

ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು!!

ಗೂಡು ದೀಪ

ಹೆಸರೇ ಸೂಚಿಸುವಂತೆ "ದೀಪಾ"ವಳಿಯನ್ನು ಬೆಳಕಿನ ಹಬ್ಬವಾಗಿ ಆಚರಿಸೋಣ; ಸದ್ಧಿನ ಪಟಾಕಿಯನ್ನು ಸಿಡಿಸದಿರುವ ಮೂಲಕ ಶಬ್ಧ ಮಾಲಿನ್ಯಕ್ಕೆ ಕಡಿವಾಣ ಹಾಕೋಣ.

ಎಲ್ಲರ ಬಾಳಿನ ಕತ್ತಲೆಯನ್ನು ಕಳೆದು ಬೆಳಕು ನೀಡಲಿ ಎಂಬ ಹಾರೈಕೆಗಳು!!

Wednesday, 19 October 2011

ಪುಸ್ತಕ ಪರಿಚಯ - "ಕಾಡು ಪ್ರಾಣಿಗಳ ಜಾಡಿನಲ್ಲಿ"




ಈ ಪುಸ್ತಕದ ಲೇಖಕರು - ಕೆ. ಉಲ್ಲಾಸ ಕಾರಂತ. ಇವರು ಹುಲಿ ಹಾಗು ಅದಕ್ಕೆ ಸಂಬಂಧಿಸಿದ ಸಂರಕ್ಷಣೆಯ ವಿಷಯಗಳಲ್ಲಿ ಪ್ರಪಂಚದ ಅಗ್ರಮಾನ್ಯ ಪರಿಣತರಲ್ಲಿ ಒಬ್ಬರು.

ಈ ಪುಸ್ತಕದಲ್ಲಿ ಕರ್ನಾಟಕದ ಕಾಡು ಪ್ರಾಣಿಗಳ ಸಂಕ್ಷಿಪ್ತ ಪರಿಚಯವಿದೆ. ಹಾಗೆಯೇ ಅರಣ್ಯ ನಾಶದ ಕಾರಣ ಮತ್ತು ಪರಿಣಾಮಗಳನ್ನು ವಿವರವಾಗಿ ನೀಡಲಾಗಿದೆ. ವೈಜ್ಞಾನಿಕ ತಳಹದಿಯ ಮೇಲೆ ಹೇಗೆ ಕಾಡು ಹಾಗು ವನ್ಯಜೀವಿಗಳನ್ನು ರಕ್ಷಿಸಿ ಬೆಳೆಸಬೇಕೆಂಬ ಬಗೆಗೂ ಚಿಂತಿಸಲಾಗಿದೆ.

ಇತ್ತೀಚಿಗೆ ಆನೆಗಳು ನಾಡಿಗೆ ನುಗ್ಗಿ ಬೆಳೆ ನಾಶ ಮಾಡುತ್ತದೆ ಎಂದು ಎಲ್ಲೆಲೂ ಸುದ್ಧಿ. ಸರ್ಕಾರ ಒಂದಿಷ್ಟು ಪರಿಹಾರ ಅಂತ ನೀಡಿ ಮರೆತು ಬಿಡುತ್ತದೆ. ಕೆಲವು ಕಡೆ ಅದೂ ಇಲ್ಲ !! ಆದರೆ ಅವು ಯಾಕೆ ಕಾಡು ಬಿಟ್ಟು ನಾಡಿಗೆ ಬರುತ್ತವೆ, ಮುಂದೆ ಹೀಗಾಗದಂತೆ ಏನು ಮಾಡಬೇಕು ಎಂದು ಯೋಚಿಸುವ ಬುದ್ಧಿ ನಮ್ಮ ಯಾವ ಸರ್ಕಾರಕ್ಕೂ ಇಲ್ಲ !!

ಲೇಖಕರು - ಕೆ. ಉಲ್ಲಾಸ ಕಾರಂತ
ವಿತರಕರು - ನವಕರ್ನಾಟಕ ಪ್ರಕಾಶನ

Tuesday, 18 October 2011

ಪುಸ್ತಕ ಪರಿಚಯ - "ಹಳ್ಳಿಯ ಚಿತ್ರಗಳು"


ಗೊರೂರು ರಾಮಸ್ವಾಮಿ ಅಯ್ಯಂಗಾರರು ತಮ್ಮ ಜೀವನದಲ್ಲಿ ಕಂಡ/ಅನುಭವಿಸಿದ ಕೆಲವು ಪ್ರಸಂಗಗಳಿಗೆ ಅಕ್ಷರದ ರೂಪ ನೀಡಿದ್ದಾರೆ. ಹಳ್ಳಿಯ ಜೀವನದ ದೃಶ್ಯಗಳಿಗೆ ನವಿರಾದ ಹಾಸ್ಯದ ಲೇಪನ ನೀಡಿ ಇಲ್ಲಿ ಪ್ರಸ್ತುತಪಡಿಸಿದ್ದಾರೆ.

ಲೇಖಕರು - ಗೊರೂರು ರಾಮಸ್ವಾಮಿ ಅಯ್ಯಂಗಾರ್
ವಿತರಕರು - ಐಬಿಎಚ್ ಪ್ರಕಾಶನ, ಬೆಂಗಳೂರು

Saturday, 15 October 2011

ಪುಸ್ತಕ ಪರಿಚಯ - "ಬಂಗಾರದ ಕತ್ತೆ"



ಬೀChiಯವರ ಕೃತಿ. ಹೆಸರೇ ಸೂಚಿಸುವಂತೆ ಮಡಿವಂತರಿಗೆ "Chi" ಎನ್ನಿಸಬಹುದಾದ ಲೇಖಕ. ಒಂದು ನಾಟಕ ಕಂಪನಿಯಲ್ಲಿ ನಡೆಯುವ ವಿದ್ಯಮಾನಗಳನ್ನು ಬೀChiಯವರು ಹಾಸ್ಯಮಿಶ್ರಿತ ಬರಹದ ರೂಪದಲ್ಲಿ ಪ್ರಸ್ತುತಪಡಿಸಿದ್ದಾರೆ. ಇದರಲ್ಲಿ ಉಪಯೋಗಿಸಿರುವ ಕೆಲ ಪದಗಳು ಕೆಲವು ಜನರಿಗೆ ಹಿಡಿಸಲಿಕ್ಕಿಲ್ಲ. ಆದರೆ ಇದೇ ಬೀChiಯವರ ಶೈಲಿ. ಅದನ್ನು ಒಪ್ಪುವುದು ಬಿಡುವುದು ಓದುಗರಿಗೆ ಬಿಟ್ಟದ್ದು.

ಕಥೆಯ ಆರಂಭ ಹೀಗೆ --
"ವತ್ಸಾ, ಧ್ರುವಕುಮಾರ! ನಾನು ನಿನ್ನ ಘೋರ ತಪಸ್ಸಿಗೆ ಮೆಚ್ಚಿದ್ದೇನೆ, ಬೇಕಾದ ವರವನ್ನು ಕೇಳು."
"ಬಾಕಿ ಇರುವ ನನ್ನ ಮೂರು ತಿಂಗಳ ಸಂಬಳವನ್ನು ಕೊಟ್ಟು ಬಿಡಿ, ಮಹರಾಯರೇ. ನಾನು ಊರಿಗೆ ಹೋಗುವುದುಂಟು, ದಮ್ಮಯ್ಯ." 


ಲೇಖಕರು - ಬೀChi
ವಿತರಕರು - ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ

Friday, 14 October 2011

ಪುಸ್ತಕ ಪರಿಚಯ - "ಗ್ರಹಣ"


ಒಮ್ಮೆ ಕೈಗೆತ್ತಿಕೊಂಡರೆ ಕೆಳಗಿಡುವ ಮನಸ್ಸೇ ಆಗುವುದಿಲ್ಲ. ಭೈರಪ್ಪನವರ ಕೃತಿಗಳೇ ಹಾಗೆ!!

"ಗ್ರಹಣ" ಇದು ೧೯೭೨ರಲ್ಲಿ ಮೊದಲ ಮುದ್ರಣ ಕಂಡ ಕೃತಿ. ಸೂರ್ಯಗ್ರಹಣದ ವೈಜ್ಞಾನಿಕ ವಿಶ್ಲೇಷಣೆಯೊಂದಿಗೆ ಪ್ರಾರಂಭವಾಗುವ ಕಥೆ ಮುಂದೆ ಧರ್ಮ-ಅಧರ್ಮದ ವಿಷಯವಾಗಿ ಸಾಗುತ್ತದೆ. ಮಠ, ಮಂದಿರ, ದೇವರು, ಜ್ಞಾನಯೋಗ, ಭಕ್ತಿಯೋಗ, ಕರ್ಮಯೋಗ, ಸನ್ಯಾಸ, ಗೃಹಸ್ಥಾಶ್ರಮ, ಸಾಮಾಜಿಕ ಕಾರ್ಯ - ಹೀಗೆ ನಾನಾ ವಿಷಯಗಳ ಬಗ್ಗೆ ಪರ-ವಿರುದ್ಧ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾ ಕಥೆ ಸಾಗುತ್ತದೆ. ಓದುಗರನ್ನು ಅರೆಕ್ಷಣವಾದರು ಈ ಬಗ್ಗೆ ಚಿಂತಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ.

ಆಯ್ದ ಒಂದೆರಡು ಸಾಲುಗಳು -- " ಅಲ್ಲಿ ಗ್ರಹಣವಾಗುಕ್ಕೂ ಇಲ್ಲಿ ಹಂಡೆಗೆ ಹುಳಿ ಹಾಕುಕ್ಕೂ ಏನು ಸಂಬಂಧ ಅಂತಲೇ?"
"ಎಷ್ಟೋ ಸಲ ಬರೀ ಸೈನ್ಸ್ ಎಲ್ಲತಕ್ಕೂಉತ್ತರ ಹೇಳುಲ್ಲ. ಗ್ರಹಣ ಹಿಡಿದ ವರ್ಷ ಮಾವಿನಹಣ್ಣುಗಳೆಲ್ಲ ಕೊಳೆತು ಹೋಗುತ್ತೆ, ಯಾಕೆ ಹೇಳಿ?"

ಲೇಖಕರು - ಎಸ್. ಎಲ್. ಭೈರಪ್ಪ
ವಿತರಕರು - ಸಾಹಿತ್ಯ ಭಂಡಾರ, ಬಳೇಪೇಟೆ ಬೆಂಗಳೂರು

Monday, 10 October 2011

ಪುಸ್ತಕ ಪರಿಚಯ - "ಮೂಜನ್ಮ"



ಶಿವರಾಮ ಕಾರಂತರ "ಗೊಂಡಾರಣ್ಯ"ದಂತೆ ಇದೂ ಒಂದು ರಾಜಕೀಯ ವಿಷಯಾಧಾರಿತ ಕಾದಂಬರಿ. "ಗೊಂಡಾರಣ್ಯ"ದಲ್ಲಿ ವಿವಿಧ ಪಕ್ಷಗಳ ನಡುವಿನ ಗುದ್ದಾಟವನ್ನು ಚಿತ್ರಿಸಿದರೆ, ಇಲ್ಲಿ ಒಬ್ಬ ಪ್ರಭಾವಿ ರಾಜಕೀಯ ವ್ಯಕ್ತಿಯ ಬದುಕೇ ಕಾದಂಬರಿಯ ಕಥಾವಸ್ತು.

ಸ್ವಾತಂತ್ರ್ಯಾನಂತರದ ಸುಮಾರು ೧೫ ವರ್ಷಗಳ ಕಾಲ ಹಾಗಲವಾಡಿ ಸಂಸ್ಥಾನದ "king maker" ಆಗಿ ಬದುಕಿ, ಅಳಿದ ಚಂದ್ರಕಾಂತ ಗುಪ್ತ ಎನ್ನುವ ವ್ಯಕ್ತಿ ಇಲ್ಲಿ ಮುಖ್ಯ ಪಾತ್ರದಾರಿ. ಇವರ ಅಭಿಮಾನಿಗಳಲ್ಲೊಬ್ಬರಾದ ಪತ್ರಕರ್ತ ರಂಗನಾಥ ರಾಯರು ದಿವಂಗತ ಚಂದ್ರಕಾಂತ ಗುಪ್ತರ ಜೀವನ ಚರಿತ್ರೆ ಬರೆಯಲು ತೊಡಗುತ್ತಾರೆ. ಇದಕ್ಕಾಗಿ ಮಾಹಿತಿ ಸಂಗ್ರಹಿಸಲು ದಿವಂಗತ ಗುಪ್ತರ ಮಡದಿ, ನಳಿನಿಯೊಡನೆ ಸಮಾಲೋಚಿಸಿದಾಗ ಅವರಿಗೆ ಸಿಗುವುದು ಕೇವಲ ಇತ್ತೀಚಿನ ಹತ್ತಿಪತ್ತು ವರ್ಷಗಳ ವಿವರ. ಇದಕ್ಕೂ ಹಿಂದಿನ ಮಾಹಿತಿಯನ್ನು ಕಲೆ ಹಾಕಲು ಇಬ್ಬರೂ ಜೊತೆಗೂಡಿ ಊರೂರು ಸುತ್ತಿ ಗುಪ್ತರ ಪೂರ್ವ ಚರಿತ್ರೆಯನ್ನು ಕೆದಕುತ್ತ ಹೋದಂತೆ ಅವರ ಇನ್ನೆರಡು ರೂಪಗಳು ಅನಾವರಣಗೊಳ್ಳುತ್ತವೆ.

ಈ ರೀತಿ ಮೂರು ಸ್ಥಳಗಳಲ್ಲಿ, ಮೂರು ವಿವಿಧ ಕಾಲಮಾನಗಳಲ್ಲಿ, ಮೂರು ಅವತಾರದಂತೆ ಬದುಕಿದ ವ್ಯಕ್ತಿಯ ಜೀವನವೇ "ಮೂಜನ್ಮ". ಈ ಮೂಜನ್ಮದ ವಿವರಗಳನ್ನು ಓದಿ ಆನಂದಿಸಿ!!

"ಮೂಜನ್ಮ"ದಿಂದ ಆಯ್ದ ಒಂದೆರಡು ಸಾಲುಗಳು --- "ವ್ಯಕ್ತಿ ಸ್ವಾರ್ಥಕ್ಕೆ ಇರಿಸಿಕೊಂಡಂಥ ಒಂದು ಭವ್ಯ ಹೆಸರೆಂದರೆ - ದೇಶಸೇವೆಯೆಂಬ ಪದ. ಅದು ಹಳಸಿದರೆ 'ಜನತಾ ಸೇವೆ' ಎಂದರಾಯಿತು. ಅದರ ಸಾಧನೆಗಾಗಿ ದಿನ ದಿನ ಹೊಸ ತಂತ್ರ, ಮಂತ್ರಗಳನ್ನು ಹುಡುಕುತ್ತಲೇ ಇದ್ದಾರೆ. ಯಾವ ಮಂತ್ರವನ್ನು ಜನಪ್ರಿಯವನ್ನಾಗಿ ಮಾಡಿದರೆ ದೇಶದ ಮೂಢಮತಿಗಳು 'ಭಜ ಗೋವಿಂದಂ' ಎಂದು ಭಕ್ತಿಯಿಂದ ಕಣ್ಮುಚ್ಚಿ  ಕುಳಿತಿರುತ್ತಾರೆ - ಎಂಬ ಉಪಾಯ ಹುಡುಕುತ್ತಿದ್ದಾರೆ."

ಲೇಖಕರು - ಡಾ|| ಕೆ.ಶಿವರಾಮ ಕಾರಂತ
ವಿತರಕರು - ಸಪ್ನ ಬುಕ್ ಹೌಸ್

ಪುಸ್ತಕ ಪರಿಚಯ

ನಾನು ಓದಿದ ಕೆಲವು ಪುಸ್ತಕಗಳ ಕಿರುಪರಿಚಯ ಒಂದೊಂದಾಗಿ ಇಲ್ಲಿ ನೀಡುತ್ತಿದ್ದೇನೆ. ಇದು ಆ ಪುಸ್ತಕದ ಬಗೆಗಿನ ವಿಮರ್ಶೆ ಅಲ್ಲ, ಕೇವಲ BLOG ಓದುವವರ ಆಸಕ್ತಿಗಾಗಿ ಕೆಲವು ಮಾಹಿತಿ ಅಷ್ಟೇ. ಕನ್ನಡ ಪುಸ್ತಕಗಳ ಪರಿಚಯ ಇತರರಿಗೆ ದೊರೆಯಲಿ ಎಂಬ ಆಶಯದೊಂದಿಗೆ!!

Thursday, 22 September 2011

ಒಂದು ಸಿಗ್ನಲ್ ಕಥೆ-ವ್ಯಥೆ!!

ನಿನ್ನೆ ಕಚೇರಿಯಿಂದ ಹಿಂದಿರುಗುವಾಗ ನಾಯಂಡಹಳ್ಳಿ ಸಿಗ್ನಲ್ (ಮೈಸೂರು ರಸ್ತೆ ಹಾಗು ರಿಂಗ್ ರಸ್ತೆ ಕೂಡುವ ಸ್ಥಳ. ಬಹಳ ವಾಹನಗಳು ಓಡಾಡುವ junction. ಒಂದು ಬದಿಯ waiting time ಬರೋಬ್ಬರಿ ೬ ನಿಮಿಷ!!) ಬಳಿ ಕಂಡಂತಹ ದೃಶ್ಯಗಳು:

ದೃಶ್ಯ ೧:  ಒಬ್ಬಳು ಮಧ್ಯವಯಸ್ಸಿನ ಹೆಂಗಸು. ಕೊರಳಲ್ಲಿ ದೇವರ ಫೋಟೋ ನೇತಾಡಿಸಿಕೊಂಡಿದ್ದಾಳೆ. ಒಂದು ಕೈಯಲ್ಲಿ ಘಂಟೆ, ಇನ್ನೊಂದರಲ್ಲಿ ಅರಿಶಿನ-ಕುಂಕುಮ-ಚಿಲ್ಲರೆ ಕಾಸಿಂದ ಕೂಡಿರುವ ತಟ್ಟೆ. Traffic signal ನಲ್ಲಿ ನಿಂತಿರುವ ಗಾಡಿಗಳ ಬಳಿ ಸಾಗಿ ಘಂಟೆ ಬಾರಿಸಿ ತಟ್ಟೆ ಮುಂದಿಡುತ್ತಾಳೆ. ಹೀಗೆ ಗಾಡಿಯಿಂದ ಗಾಡಿಗೆ ಮುಂದುವರೆದಿತ್ತು ಅವಳ ಸವಾರಿ.

ದೃಶ್ಯ ೨:  ಅತ್ತ ಒಬ್ಬ ಬಾಲಕ. ವಯಸ್ಸು ೭ ರಿಂದ ೯ ವರ್ಷ. ಬೆನ್ನಲ್ಲಿ ಒಂದು ಚೀಲ. ಕೈಯಲ್ಲಿ ಆಟಿಕೆಗಳು ತುಂಬಿದ ಒಂದು ಸಣ್ಣ ಪೆಟ್ಟಿಗೆ. ಆಟಿಕೆ ಕೊಳ್ಳಿರೆಂದು ಗಾಡಿಯಿಂದ ಗಾಡಿಗೆ ಓಡಾಟ.

ದೃಶ್ಯ ೩:  ಅಲ್ಲೇ ಬದಿಯಲ್ಲಿ ಒಂದು ಸಣ್ಣ ಬೇಕರಿ. ಆಟಿಕೆ ಮಾರಟಕ್ಕೆ ಸಣ್ಣ ವಿರಾಮ ನೀಡಿದ ಬಾಲಕ ಅಂಗಡಿಯ ಬಳಿ ಬಂದು ಅಂಗಡಿಯವನಿಗೆ ಚಿಲ್ಲರೆ ಕಾಸನ್ನು ನೀಡಿದ. ಬಾಟಲಿಯಲ್ಲಿ ಶೇಕರಿಸಿಟ್ಟ ನೀರನ್ನು ಗಂಟಲೊಳಗೆ ಇಳಿಸುತ್ತಲಿದ್ದ. ಏನು ಕೊಳ್ಳುತ್ತಾನೆಂದು ಕುತೂಹಲದಿಂದ ನಾನು ನಿರೀಕ್ಷಿಸುತ್ತಿದ್ದೆ. ಅಂಗಡಿಯಾತ ಬಾಲಕನ ಕೈಗೆ ನೀಡಿದ್ದು ೨ ಗುಟ್ಕಾ ಪ್ಯಾಕೆಟ್!! ಕ್ಷಣಮಾತ್ರದಲ್ಲಿ ಒಂದು ಪೊಟ್ಟಣವನ್ನು ತೆರೆದ ಬಾಲಕ, ಅದನ್ನು ಬಾಯಿಗೆ ಏರಿಸಿಯೇ ಬಿಟ್ಟ!!

ದೃಶ್ಯ ೪:  ಹಲ್ಲು ಶುಚಿಗೊಳಿಸುವ ದ್ರಾವಣವನ್ನು ಮಾರುವ ಒಬ್ಬ ಹುಡುಗ. ಬಾಲಕ ಅವನ ಬಳಿ ಸಾಗಿ ಏನದು ಎಂದು ವಿಚಾರಿಸುತ್ತಾನೆ. ಬಳಿಕ 'ನನ್ನ ಹಲ್ಲಿಗೆ ಆಗುತ್ತದೆಯೇ?' ಎಂದು ವಿಚಾರಿಸುವಂತಿದೆ ಹುಡುಗನ ಹಾವ-ಭಾವ. ಅತ್ತ ತಿರುಗಿ 'ಅಮ್ಮ' ಎಂದು ಕೂಗುತ್ತಾನೆ. ಕತ್ತು ತಿರುಗಿಸಿ ನೋಡಿದರೆ, ದೇವರ ಫೋಟೋ ಹಿಡಿದಿರುವವಳೇ ಆ ಬಾಲಕನ ತಾಯಿ!! 

ಅಷ್ಟರಲ್ಲಿ ಸಿಗ್ನಲ್ ತೆರವಾಯಿತು. ನಾನಿದ್ದ ಬಸ್ಸು ಮುಂದೆ ಸಾಗಿತು.

ಈ ದೃಶ್ಯಾವಳಿಯನ್ನು ಏನೆಂದು ವರ್ಣಿಸಲಿ? ದುಡಿದು ತಿನ್ನುವ ಬದಲು ದೇವರ ಹೆಸರಲ್ಲಿ ಭಿಕ್ಷೆ ಬೇಡುವ ತಾಯಿ, ಶಾಲೆಗೆ ಹೋಗಬೇಕಾದ ವಯಸ್ಸಲ್ಲಿ ದುಶ್ಚಟಗಳಿಗೆ ಬಲಿಯಾಗಿ ಬೀದಿ ಬದಿ ವ್ಯಾಪಾರ ಮಾಡಿ ಜೀವಿಸುವ ಬಾಲಕ, ಕಣ್ಣೆದುರೇ ಮಗ ಕೆಟ್ಟ ಅಭ್ಯಾಸಗಳಿಗೆ ದಾಸನಾದರೂ ಬುದ್ಧಿ ಹೇಳದ ತಾಯಿ, ತಂಬಾಕು ಪದಾರ್ಥಗಳನ್ನು 18 ವರ್ಷದ ಕೆಳಗಿನವರಿಗೆ ಮಾರಬಾರದೆಂಬ ನಿಯಮವನ್ನು ಗಾಳಿಗೆ ತೂರಿರುವ ವ್ಯಾಪಾರಿ, ಇದನ್ನೆಲ್ಲಾ ಮೂಕ ಪ್ರೇಕ್ಷಕನಂತೆ ಕಂಡ ನಾನು!!!

Tuesday, 12 April 2011

ಸರಕಾರಿ ಕೆಲಸ!!!




Cement only on top..ಕೆಳಗೆಲ್ಲ ಬರಿ ಮಣ್ಣು ಮಿಶ್ರಿತ ಮರಳು!!!!
ರಸ್ತೆ ಹಳ್ಳ ಬೇಳಲು ಇಂತ ಕಳಪೆ ಕಾಮಗಾರಿಯೇ ಕಾರಣ.

ಸರಕಾರಿ ಕೆಲಸ, ದೇವರ ಕೆಲಸ - ಸರಕಾರಿ ಸೌಲಭ್ಯವನ್ನು ಬಳಸುವ ಜನರನ್ನು ಆ ದೇವರೇ ಕಾಪಾಡಬೇಕು!!!

Thursday, 27 January 2011

(ಹ)ಗ(ರ)ಣರಾಜ್ಯೋತ್ಸವ !!!

ಇತ್ತೀಚಿಗೆ ಭಾರತ ದೇಶದ ಉದ್ದಗಲಕ್ಕೂ ಆಚರಿಸಿದ "ಸಂಭ್ರಮ"ದ ಗಣರಾಜ್ಯೋತ್ಸವದ ಸಂಧರ್ಭದಲ್ಲಿ ಈ ಆಲೋಚನೆ.

from Google images

ಎಲ್ಲರಿಗೂ ತಿಳಿದಿರುವಂತೆ "ಗಣರಾಜ್ಯೋತ್ಸವ" - by definition - ದೇಶಕ್ಕೆ ಒಂದು ಸಂವಿಧಾನ ರೂಪಿಸಿ ಜಾರಿಗೊಳಿಸಿದ ನೆನಪಿಗಾಗಿ ನಡೆಯುವ ವಾರ್ಷಿಕ ಆಚರಣೆ. ಇದೆ ೨೬ರಂದು ದೇಶದೆಲ್ಲೆಡೆ ಸಂಭ್ರಮದ ೬೨ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ಈ ಸಂಧರ್ಭದಲ್ಲಿ ದೇಶದಲ್ಲಿ ನಡೆದ-ನಡೆಯುತ್ತಿರುವ ವಿಧ್ಯಮಾನಗಳನ್ನು ಗಮನಿಸಿದರೆ ಇದು ಗಣರಾಜ್ಯೋತ್ಸವೋ ಅಥವಾ ಹಗರಣರಾಜ್ಯೋತ್ಸವವೋ? ಎಂದೆನಿಸಿದರೆ ಆಶ್ಚರ್ಯವಿಲ್ಲ!!!

ದಿನ ಬೆಳಗಾದರೆ ಪತ್ರಿಕೆಯ ಮುಖಪುಟದ ತುಂಬೆಲ್ಲ ಬರೀ ಮೋಸ, ವಂಚನೆ, ಹಗರಣಗಳೇ!!! - "2G scam, land scam, mining scam, black money in foreign accounts,  CWG scam - ಬರೀ ಇವೇ ಸುದ್ದಿ. ರೌಡಿಗಳ ಬೀದಿ ಕಾಳಗ, ಸರಕಾರಿ ಇಲಾಖೆಯಲ್ಲಿನ ಲಂಚಾವತಾರ - ಇವೆಲ್ಲ ನೋಡಿದರೆ ದೇಶದಲ್ಲಿ ಒಂದು ಕಾನೂನು/ಸಂವಿಧಾನ ಅಸ್ಥಿತ್ವದಲ್ಲಿ ಇದೆಯೇ ಎಂದು ಯೋಚಿಸುವ ಪರಿಸ್ಥಿತಿ ಬಂದೊದಗಿದೆ. ಇವೆಲ್ಲದರ ನಡುವೆ ಎಲ್ಲೋ ಅಪರೂಪಕ್ಕೆ ಕಾಣಸಿಗುವ ಒಂದಿಬ್ಬರು ನಿಷ್ಟಾವಂತ ಅಧಿಕಾರಿಗಳು ತಮ್ಮ ಜೀವದ ಹಂಗನ್ನು ತೊರೆದು ಕಾರ್ಯ ನಿರ್ವಹಿಸುವ ಪರಿಸ್ಥಿತಿ...೬೨ನೇ ಗಣರಾಜ್ಯೋತ್ಸವದ ಕೇವಲ ೨ ದಿನ ಮುಂಚೆ ಮಹಾರಾಷ್ಟ್ರದಲ್ಲಿ ನಡೆದ ಘಟನೆಯೇ ಇದಕ್ಕೆ ಸಾಕ್ಷಿ.

courtesy@The Telegraph

ಒಮ್ಮೆ ಯೋಚಿಸಿ ನೋಡಿ - ಇದಕ್ಕೆಲ್ಲ ಕಾರಣ ಯಾರು? ಭಾರತ ದೇಶದ ಸಮಸ್ತ ನಾಗರಿಕರೇ ಇದಕ್ಕೆಲ್ಲ ಹೊಣೆ ಎಂದರೆ ತಪ್ಪಾಗಲಾರದು. ಎಲ್ಲಿ ತನಕ ನಾವು "ಸ್ವಲ್ಪ adjust" ಮಾಡ್ಕೊಳಿ ಎನ್ನುವ ಮನಸ್ಥಿತಿಇಂದ ಹೊರಬರುವುದಿಲ್ಲವೂ ಅಲ್ಲಿಯ ತನಕ ಸುಧಾರಣೆ ಅಸಾಧ್ಯ!!!! 

Friday, 14 January 2011

संस्कृताय जीवनं

"हरि ॐ" - ಇದು ಬೆಂಗಳೂರಿನಲ್ಲಿ ಇತ್ತೇಚೆಗೆ ಜರುಗಿದ ವಿಶ್ವ ಸಂಸ್ಕೃತ ಸಮ್ಮೇಳನದಲ್ಲಿ ಎಲ್ಲ ಸ್ವಯಂಸೇವಕರ ಬಾಯಿಂದ ಹೊರಟ ಧ್ವನಿ - ಮೇಳಕ್ಕೆ ಬಂದ ಜನರನ್ನು ನಗುಮೊಗದಿಂದ ಸ್ವಾಗತಿಸಿದ ಪರಿ!!

ಸ್ವಾಗತ ಕಮಾನು

ಜನವರಿ ೭ರಿಂದ, ೪ ದಿನಗಳ ಕಾಲ ನಡೆದ ಸಂಸ್ಕೃತ "ಉತ್ಸವ"ದಲ್ಲಿ ಪಾಲ್ಗೊಂಡ ಮಂದಿ ಲಕ್ಷಾಂತರ. ನಾನು ೨ ದಿನ ಮೇಳಕ್ಕೆ ಭೇಟಿ ನೀಡಿದ್ದೆ. ಅಲ್ಲಿ ಏರ್ಪಡಿಸಿದ್ದ "ಜ್ಞಾನಗಂಗಾ" ಪ್ರದರ್ಶಿನಿ ಬಹಳ ಚೆನ್ನಾಗಿತ್ತು. ಪ್ರಾಚೀನ ಕಾಲದ ವೇದ-ವಿಜ್ಞಾನಗಳ ಕಿರು ಪರಿಚಯ, ಮಹಾಭಾರತ ಯುದ್ಧದ ವ್ಯೂಹ ರಚನೆಗಳ ಮಾದರಿ, Pencil ಮೊನೆಯ ಮೇಲೆ ಕೆತ್ತಿದ ಗಣಪನ ವಿಗ್ರಹ ಎಲ್ಲವೂ ಆಕರ್ಷಕವಾಗಿತ್ತು.

ಚಕ್ರ ವ್ಯೂಹ

ಸಂಸ್ಕೃತಕ್ಕೆ ಸಂಬಂದಪಟ್ಟ ಪುಸ್ತಕಗಳ ಮಾರಾಟ ಭರ್ಜರಿಯಾಗಿತ್ತು. ಎಲ್ಲ ೧೫೪ ಅಂಗಡಿಯ ಮುಂದೆ ಜನ ಜಾತ್ರೆ!!!!


ಮಾದರಿ "ಸಂಸ್ಕೃತ ಗ್ರಾಮ" ಇನ್ನೊಂದು ಆಕರ್ಷಣೆ. ವಿಧ್ಯಾಲಯ, ಅಂಚೆ ಕಚೇರಿ, ವಾಹನ ದುರಸ್ಥಿ ಸ್ಥಳ, ಸಂಸ್ಕೃತ ಭಾಷಿಕ ಮನೆ, ನ್ಯಾಯಾಲಯ - ಎಲ್ಲೆಲ್ಲೂ ಸಂಸ್ಕೃತದಲ್ಲೇ ಸಂಭಾಷಣೆ!!!

ಸಂಸ್ಕೃತ ಗ್ರಾಮ

ಇದಲ್ಲದೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಜರುಗಿದವು. ಸಂಸ್ಕೃತ ಯಕ್ಷಗಾನ, ನಾಟಕ, ನೃತ್ಯ, ಹಾಡುಗಾರಿಕೆ, ವಿಚಾರ ಸಂಕೀರ್ಣ ಮುಂತಾದವು.

ವಿಚಾರ ಮಂಥನ



ಈ ಮೇಳದಿಂದ ನನಗೆ ಒಂದು ಒಳ್ಳೆ ಪ್ರಾಯೋಜನ ಆಯಿತು. ಬಹಳ ದಿನಗಳಿಂದ ಸಂಸ್ಕೃತ ಕಲಿಯಬೇಕು ಎಂದುಕೊಳ್ಳುತ್ತಿದ್ದೆ. ಆದರೆ ಸರಿಯಾದ ವೇದಿಕೆ ಸಿದ್ದವಾಗಿರಲಿಲ್ಲ :-) "ಸಂಸ್ಕೃತ ಭಾರತಿ" ಸಂಸ್ಥೆಯು, ಅಂಚೆ ಮೂಲಕ ಸಂಸ್ಕೃತ ಶಿಕ್ಷಣ ಎಲ್ಲ ವರ್ಗದ ಜನರಿಗೂ ದೊರೆಯುವಂತೆ ಮಾಡುತ್ತಿದ್ದಾರೆ. ನಾನು ಕೂಡ ಇದಕ್ಕೆ ಸೇರಿಕೊಂಡಿದ್ದೇನೆ. ವರ್ಷಕ್ಕೆ ೨ ಬಾರಿ ಪರೀಕ್ಷೆಗಳಿರುತ್ತದೆ. ಹೆಚ್ಚಿನ ವಿವರಗಳಿಗೆ ಸಂಸ್ಕೃತ ಭಾರತಿ ಶಾಖೆಗಳನ್ನೂ ಸಂಪರ್ಕಿಸಬಹುದು - http://www.samskritabharati.org/sbindia/

ಅಂತೂ ಈ ಮೇಳ ಸಂಸ್ಕೃತವು ಇನ್ನೂ ಜೀವಂತವಾಗಿದೆ ಎಂದು ನಿರೂಪಿಸುವಲ್ಲಿ ಯಶಸ್ವಿಯಾಯಿತು.