Saturday 18 December, 2010

ಹಾಗೆ ಸುಮ್ಮನೆ


ಬೆಂಗಳೂರಿನ ಬೀದಿಯಲ್ಲಿ ಸೆರೆಹಿಡಿದ ಚಿತ್ರ. ಈ ಮಾತು ನೂರಕ್ಕೆ ನೂರರಷ್ಟು ಅಲ್ಲದಿದ್ದರೂ ಸ್ವಲ್ಪವಾದರೂ ಸತ್ಯವೇ!!!

Saturday 11 December, 2010

"ಗೊಂಡಾರಣ್ಯ"ವೆಂಬ ರಾಜಕೀಯ ದೊಂಬರಾಟ

ಮುಖ ಪುಟ
"ರಾಜಕೀಯ" - ಅಂದು. ಇಂದು, ಎಂದೆಂದೂ ಕೊಳೆತು ನಾರುವ ವ್ಯವಸ್ಥೆ - ಶಿವರಾಮ ಕಾರಂತರ "ಗೊಂಡಾರಣ್ಯ"ವೆಂಬ ಕಾದಂಬರಿಯನ್ನು ಓದಿ ಮುಗಿಸಿದಾಗ ಈ ರೀತಿ ಯೋಚಿಸದೆ ಬೇರೆ ದಾರಿ ಇರಲಿಲ್ಲ!!!

೧೯೫೪ರಲ್ಲಿ ಮೊದಲ ಪ್ರಕಟಣೆ ಕಂಡ ಈ ಕಾದಂಬರಿಯಲ್ಲಿ ನಿರೂಪಿಸಿರುವ ಸ್ಥಿತಿಗತಿಗಳು ಸರ್ವಕಾಲಕ್ಕೂ ಅನ್ವಯಿಸುತ್ತದೆ. ಚುನಾವಣೆಯಲ್ಲಿ ಗೆಲ್ಲಲು ಉಪಯೋಗಿಸುವ ವಾಮ ಮಾರ್ಗ, ಮತದಾರರಿಗೆ ಹಣದ ಆಮಿಷ, ಮಂತ್ರಿಮಂಡಲ ರಚನೆಯಲ್ಲಿನ ಭಿನ್ನಾಭಿಪ್ರಾಯ, ಸ್ವಜನ ಪಕ್ಷಪಾತ, ಜಾತಿ ರಾಜಕಾರಣ - ಇವೆಲ್ಲವನ್ನೂ ನಿರೂಪಿಸಿದ ರೀತಿಯು ಇಂದಿನ ರಾಜಕೀಯ ಸ್ಥಿತಿಗೆ ಹಿಡಿದ ಕನ್ನಡಿಯಂತಿದೆ. ಸ್ವಾತಂತ್ರ್ಯ ಸಿಕ್ಕ ೭ಳೇ ವರ್ಷಕ್ಕೆ ಪ್ರಕಟವಾದ ಈ ಕಾದಂಬರಿಯಲ್ಲಿನ ರಾಜಕೀಯ ಹುಳುಕನ್ನು ಓದಿದರೆ, ಭಾರತದ ರಾಜಕಾರಣ ಈ ಎಲ್ಲ ಕೊಳಕುಗಳಿಂದ ಮುಕ್ತಗೊಳ್ಳಲು ಇನ್ನೆಷ್ಟು ಸಮಯ ಬೇಕಾಗುವುದೋ ಎಂದೆನಿಸದೆ ಇರದು.

ಸ್ವಾತಂತ್ರ್ಯಾನಂತರದ ೧೫ ವರ್ಷಗಳಲ್ಲಿ ನಡೆಯುವ ವಿದ್ಯಮಾನಗಳೇ ಇದರ ಕಥಾಮೂಲ. ಇಂದಿನ ಪರಿಸ್ಥಿತಿಗೆ ತುಲನೆ ಹಾಕಿದರೆ ಈ ಕಾದಂಬರಿಯ ಕಥಾವಸ್ತು ಅಂತ ವಿಶೇಷದ್ದಲ್ಲ. ಆದರೆ ಆಶ್ಚರ್ಯವಾಗುವುದೇನಂದರೆ, ಸ್ವಾತಂತ್ರ್ಯ ಸಿಕ್ಕ ಬೆನ್ನಲ್ಲೇ ಹುಟ್ಟಿಕೊಂಡ (ಅಥವಾ ಮೊದಲೇ !!!) ಅಧಿಕಾರ/ಹಣದ ಆಸೆ. ದೇಶದ ಹಿತಕ್ಕಿಂತ ಸ್ವಹಿತವೆ ಮುಖ್ಯವೆನ್ನುವ ರಾಜಕೀಯ/ಅಧಿಕಾರಿ ವರ್ಗ. ಅಂದು ನಿಜವಾಗಿ ಹೀಗಿತ್ತೋ ಅಥವಾ ಇದು ಮುಂದೆ ರಾಜಕೀಯ ಕುಲಗೆಡಬಹುದು ಎನ್ನುವ ಕಾರಂತರ ದೂರದೃಷ್ಟಿ ಫಲವೋ - ನಾ ತಿಳಿಯೆ. ಇಷ್ಟೇ ಅಲ್ಲದೆ ಒಂದು "ರಾಷ್ಟ್ರೀಯ ಪಕ್ಷ", ಒಂದು "ಸ್ಥಳೀಯ ಪಕ್ಷ" ಹಾಗು ದೇಶದ ಅಭಿವೃದ್ಧಿ ಚಿಂತನೆ ಬಿಟ್ಟು, ಹೊರ ದೇಶಗಳಿಂದ ಎರವಲು ಪಡೆದ communism ಸಿದ್ಧಾಂತಕ್ಕೆ ಜೋತು ಬಿದ್ದಿರುವ "ವಾಮ ಪಕ್ಷ" - ಇವುಗಳ ನಡುವಿನ ತಿಕ್ಕಾಟ ಸಾಮಾನ್ಯ ಜನರ ರಾಜಕೀಯ ಜ್ಞಾನವನ್ನು ಪರೀಕ್ಷಿಸುವಂತಿದೆ.

ಅಂತೂ ಈ ಪುಸ್ತಕ ಎಲ್ಲೂ ಸಪ್ಪೆಗೂಡದೆ ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ. ಸಮಯವಿದ್ದರೆ ಒಮ್ಮೆ ಓದಿ.

ಕೊನೆಯಲ್ಲಿ: ನಮ್ಮ ಇಂದಿನ ಕರ್ನಾಟಕದ ಸರಕಾರದ ಧ್ಯೇಯ ವಾಕ್ಯ "ಅಭಿವೃದ್ಧಿಯೇ ಆಡಳಿತ ಮಂತ್ರ".
ಜನ ಕೇಳುವ ಪ್ರಶ್ನೆ, ಯಾರ ಅಭಿವ್ರದ್ಧಿ - ರಾಜ್ಯದ್ದೋ, ಕುಟುಂಬದ್ದೋ ?

ಲೇಖಕರು - ಡಾ|| ಕೆ. ಶಿವರಾಮ ಕಾರಂತ
ವಿತರಕರು - ಸಪ್ನ ಬುಕ್ ಹೌಸ್

Wednesday 17 November, 2010

ನಿಸ್ತಂತು ದೂರವಾಣಿಯಲ್ಲಿ ತೇಲಿ ಬಂದ ಕೆಲವು ಸಂದೇಶಗಳು - ಭಾಗ ೧

ಸ್ನೇಹಿತರು ಕಳುಹಿಸಿದ ಕೆಲವು ಚಿಕ್ಕ ಚೊಕ್ಕ ಫಾರ್ವರ್ಡ್ ಮಾಡಲಾದ ಸಂದೇಶಗಳು ನಿಮಗಾಗಿ.

**********************************************************************************************

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ,
ಧೋ ಎಂದು ಶ್ರುತಿ ಹಿಡಿದು ಸುರಿಯಿತ್ತುತ್ತು;
ಅದಕ್ಕೆ ಹಿಮ್ಮೇಳದಲಿ ಬೀಸುತಿಹ ಸುಳಿ ಗಾಳಿ,
ಶುಭೋಧಯ ಶುಭಮಸ್ತು ಎನ್ನುತ್ತಿತ್ತು.

**********************************************************************************************

Don't try to have friends who have achieved great heights,
Have a friend who can hold U when U fall from the greatest height!!!
A LOYAL IS BETTER THAN A ROYAL.

**********************************************************************************************

Engineering students special :-)


Why students always prefer LOCAL author than PRESCRIBED author books?
Local author - 
Jack and Jill went up the hill to fetch a pile of water,
Jack fell down and broke his crown,
Jill came tumbling after!!!


Prescribed author - 
Two humans ascended a certain geological protuberance to collect a hydride of oxygen whose quantity is not specified. One member falls off in rapid irregular disturbing movements and another follows !!!!!!!!!!

**********************************************************************************************

True guidance can be like a small lamp in a tunnel.
It does not show everything at once, but gives enough light for the next step to be safe and sure.


**********************************************************************************************

People will always throw stones in your path.
It depends on U what U make from it - "WALL" or "BRIDGE".
Remember U are the architect of your life!!

**********************************************************************************************

Wednesday 10 November, 2010

Little India

Little India - ಇದೇನಪ್ಪ ಅಂತ ಯೋಚಿಸ್ತಾ ಇದ್ದೀರಾ? ಸಿಂಗಪೋರ್ ಎಂಬ ಪುಟ್ಟ ದೀಪ ರಾಷ್ಟ್ರಕ್ಕೆ ಭೇಟಿ ಇಟ್ಟವರಿಗೆ ಈ ಹೆಸರು ಚಿರಪರಿಚಿತ. ಇಲ್ಲಿಗೆ ಭೇಟಿ ನೀಡದಿದ್ದರೆ ನಿಮ್ಮ ಸಿಂಗಪೋರ್ ಪ್ರವಾಸ ಅಪೂರ್ಣವೆಂದೇ ಹೇಳಬಹುದು.

ಹಾಗಂತ ಇಲ್ಲಿ ಏನು ವಿಶೇಷ ಅಂತೀರಾ? ಇಲ್ಲಿ ಕಾಲಿಟ್ಟ ತಕ್ಷಣ ನಿಮಗನ್ನಿಸಬಹುದು - ನಾವೇನು ಸಿಂಗಪೋರ್ ನಲ್ಲಿ ಇದ್ದೇವಾ ಅಥವಾ ಚೆನ್ನೈನ ಟಿ.ನಗರ್ ನಲ್ಲೋ - ಆ ಪರಿ ಇಲ್ಲಿ ಭಾರತೀಯತೆ ತುಂಬಿಕೊಂಡಿದೆ. ಊಟ-ಉಪಹಾರಗಳಿಗೆ "ಆನಂದ ಭವನ" "ಸರವಣ ಭವನ" ಎಂಬ "ಭವನಗಳ" ಸಾಲು, ಭಕ್ತಿ-ಭಾವನೆಗೆ ಶ್ರೀನಿವಾಸ, ಕಾಳಿ ಮುಂತಾದ ದೇವ-ದೇವತೆಗಳು, ಸಾಲು-ಸಾಲು ಚಿನ್ನ ಬೆಳ್ಳಿ ಆಭರಣ ಅಂಗಡಿಗಳು, ಎಲೆಕ್ಟ್ರಾನಿಕ್ಸ್ ವಸ್ತುಗಳ ಖರೀದಿಗೆ ಬೆಂಗಳೂರಿನ ನ್ಯಾಷನಲ್ ಮಾರ್ಕೆಟ್ನಲ್ಲಿರುವಂತೆ ಸಾಲು-ಸಾಲು "ಗೂಡಂಗಡಿ"ಗಳು, ತಮಿಳಿನಲ್ಲಿರುವ ಅಂಗಡಿ-ಬಸ್ ಬೋರ್ಡ್ ಗಳು ಇತ್ಯಾದಿ ಇತ್ಯಾದಿ. 


ಆಸ್ಟ್ರೇಲಿಯಾದಲ್ಲಿನ ಕಂಪನಿ ಕೆಲಸ ಮುಗಿಸಿ ಹಿಂತಿರುಗುವಾಗ ಸಿಂಗಪೋರ್ ಗೆ ಭೇಟಿ ನೀಡುವ ಅವಕಾಶ ಒದಗಿ ಬಂತು. ಸ್ವಾಮಿ ಕಾರ್ಯದೊಡನೆ ಸ್ವಕಾರ್ಯವೂ ಆಗಲಿಯೆಂದು ಸಿಂಗಪೋರ್ ನಲ್ಲಿ ಸಿಕ್ಕಿದ ೧೮ ತಾಸು "transit time" ನಲ್ಲಿ ದೇಶ ಸುತ್ತೋಣವೆಂದು "temporary visa" ಪಡೆದು, ಸ್ನಾನ ಮುಗಿಸಿ, ವಿಮಾನ ನಿಲ್ದಾಣದಿಂದ ಇನ್ನಿಬರು ಕಂಪನಿ ಸ್ನೇಹಿತರೊಡಗೂಡಿ ರಾತ್ರಿ ಸುಮಾರು ೧ರ ವೇಳೆಗೆ ಹೊರಬಿದ್ದೆವು. ಈ ಅಪರಾತ್ರಿಗೆ ಏನು ಮಾಡುವುದಪ್ಪ ಎಂದು "information center" ನಲ್ಲಿ ವಿಚಾರಿಸಲು ಸಿಕ್ಕಿದ ಉತ್ತರ "Take a cab and go to Little India". ಇಲ್ಲಿನ "ಮುಸ್ತಫಾ ಸೆಂಟರ್" ವಾಣಿಜ್ಯ ಸಂಕೀರ್ಣವು ದಿನದ ೨೪ತಾಸು ತೆಗೆದಿರುತ್ತದೆ!!!
ರಾತ್ರಿ ೨ರ ವೇಳೆ.
ನಾವು ಭೇಟಿ ನೀಡಿದ ಸಮಯ ದೀಪಾವಳಿಯ ಮುನ್ನಾ ದಿನ. ಇಡಿಯ "Little India" ಪ್ರದೇಶ ಬೆಳಕು-ತೋರಣಗಳಿಂದ ಸಿಂಗಾರಗೊಂಡಿತ್ತು. ಎಲ್ಲ ಕಡೆ ಹಬ್ಬದ ಖರೀದಿಯ ಭರಾಟೆ.

ಮುಸ್ತಫಾ ಸೆಂಟರ್ ನಲ್ಲಿನ ತಿರುಗಾಟ ಹಾಗು ಖರೀದಿಯ ನಂತರ ಬೆಳಗ್ಗೆ ೬ ಗಂಟೆಗೆ "ಆನಂದ ಭವನ"ದಲ್ಲಿ ಇಡ್ಲಿ-ವಡೆ ಸಾಂಬಾರ್.
ಬೆಳಗ್ಗಿನ ಜಾವ ೫ರ ವೇಳೆ.
ನಂತರ ಪಕ್ಕದಲ್ಲಿಯೇ ಇದ್ದ "ಪೆರುಮಾಳ್" ದೇವಸ್ಥಾನಕ್ಕೆ ಭೇಟಿ. ಇಲ್ಲಿನ ಪರಿಸರ ಸುಂದರ ಹಾಗು ಪ್ರಶಾಂತವಾಗಿತ್ತು.

ದೇವರ ದರ್ಶನದ ನಂತರ ಮೆಟ್ರೋ ರೈಲು ಹಿಡಿದು "Sentosa island" ನ ಕಡೆಗೆ ಪ್ರಯಾಣ. ಇದೊಂದು ಚಿಕ್ಕ ದ್ವೀಪದ ಮೇಲೆ ನಿರ್ಮಿಸಿದ ಮನೋರಂಜನ ಕೇಂದ್ರ. ಇಲ್ಲಿ ಎಲ್ಲ ವಯೋಮಾನಕ್ಕೆ ತಕ್ಕಂತೆ ಆಟಗಳು ಹಾಗು ಇತರೆ ಮನೋರಂಜನ ಕೇಂದ್ರಗಳಿವೆ. ಒಂದು ದಿನ ಕುಟುಂಬ ಅಥವಾ ಸ್ನೇಹಿತರ ಜೊತೆ ಸಮಯ ಕಳೆಯಲು ಬಹಳ ಪ್ರಶಸ್ಥವಾದ ಸ್ಥಳ. 


ಇಲ್ಲಯ ಹಕ್ಕಿ, ಕೀಟ ಹಾಗು ಪತಂಗ ಉಧ್ಯಾನ ಬಹಳ ಚೆನ್ನಾಗಿದೆ.

ಸಿಂಗಪೋರ್ ನ ರಾಷ್ಟ್ರೀಯ ಲಾಂಚನ - "Merilion" ನ ಪ್ರತಿಕ್ರತಿಯು ನೋಡುಗರನ್ನು ಆಕರ್ಷಿಸುತ್ತದೆ.
ಸಂಜೆ ೫ರ ತನಕ ಇಲ್ಲಿ ಸುತ್ತಾಡಿ ವಿಮಾನ ನಿಲ್ದಾಣ ಕಡೆಗೆ ಮರುಪ್ರಯಾಣ. ಸಂಜೆಯ ೭ರ ವಿಮಾನದಲ್ಲಿ ಸಿಂಗಪೋರ್ ಗೆ ವಿದಾಯ ಹೇಳಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದೆವು.

Tuesday 9 November, 2010

INTERNET ಪುರಾಣ

"Ready to chat with U" - ಇದು "Google Talk" ನಲ್ಲಿನ ನನ್ನ ಪ್ರಥಮ "Status" message!!!

ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಕಾರ್ಕಳವೆಂಬ ಸಣ್ಣ ತಾಲೂಕು ಕೇಂದ್ರದಲ್ಲಿ ನಡೆದಿದ್ದರಿಂದ ಗಣಕ ಹಾಗು ಅಂತರ್ಜಾಲದ ಅರಿವು ಅಷ್ಟೊಂದು ಇರಲಿಲ್ಲ. ೨೦೦೦ನೇ ಇಸವಿಯಲ್ಲಿ ತಂದೆಗೆ ಕಾರ್ಯನಿಮಿತ್ತ ಬೆಂಗಳೂರಿಗೆ ವರ್ಗಾವಣೆ. "Cyber Cafe" ಎಂಬ ಅಂತರ್ಜಾಲ ಸೇವಾ ತಾಣಗಳನ್ನು ಅದೇ ಪ್ರಥಮ ಬಾರಿಗೆ ಕಂಡದ್ದು!!! ಆದರೆ ಆಕಾಶದೆತ್ತರದ ಬೆಲೆಯ ಕಾರಣ ಅದರೊಳೆಗೆ ಕಾಲಿಡಲಿಲ್ಲ. ಪಿ.ಯು.ಸಿ ನಲ್ಲಿ ತೆಗೊಂಡ combination PCMC. "Computer Science"ನ ಪ್ರಯೋಗ ಪಾಠದ ರೂಪದಲ್ಲಿ ಗಣಕ ಯಂತ್ರದ ಪ್ರಥಮ ಪರಿಚಯ. ಆದರೆ ಆಗ ಪಾಠಕ್ಕಿಂತ ಆಟವೇ ಜಾಸ್ತಿ!!.

ಮುಂದೆ ಬಿ.ಇ ಓದುವ ಸಮಯ. ೩ನೇ ವರ್ಷದ ಬಿ.ಇ. ಓದಿನ ವೇಳೆಗೆ ಕಾಲೇಜಿನಲ್ಲಿ internet kioskಗಳ ಪ್ರಾರಂಭ. ನಾವು ಉಪಯೋಗಿಸಲಿ-ಬಿಡಲಿ, ಅದಕ್ಕೆ ವರ್ಷಕ್ಕೆ ಇಂತಿಷ್ಟು ಶುಲ್ಕ. ೫೦೦೦ ಜನಕ್ಕೆ ಇದದ್ದು ಬರೀ ೨೦ ಗಣಕಗಳು. ಅದರಲ್ಲಿ ಅರ್ಧ ಯಾವಾಗಲೂ ಕೆಟ್ಟು ನಿಂತಿರುತ್ತಿತ್ತು. ಇನ್ನುಳಿದಿದ್ದರಲ್ಲಿ ಜಾಗ ಸಿಗಬೇಕಾದರೆ ಕನಿಷ್ಠ ಒಂದು ತಾಸು ಸರದಿಯಲ್ಲಿ ಕಾಯಬೇಕಾಗಿತ್ತು. ಹಾಗಾಗಿ ಅದರ ಸಹವಾಸವೇ ಬೇಡವೆಂದು ಅತ್ತ ತಲೆಹಾಕಲಿಲ್ಲ. ಈ ನಡುವೆ ನನ್ನ ತಮ್ಮ ಬಿ.ಇ. ನಲ್ಲಿ "computer science" ವಿಷಯದ ಮೇಲೆ ಸೀಟು ಪಡೆದ್ದಿದ್ದರಿಂದ ಮನೆಗೆ ಗಣಕ ತಂದೆವು, but without internet. ಆಗಿನ್ನೂ ಅಂತರ್ಜಾಲ ಸೇವೆ ಈಗಿನಷ್ಟು ಸುಲಭವಾಗಿ ಕೈಗೆಟುಕುವ ವಸ್ತುವಾಗಿರಲಿಲ್ಲ. ಹೀಗೆ ೩ನೇ ವರ್ಷದ ಬಿ.ಇ. ಮುಗಿದರೂ, ಮನೆಗೆ ಗಣಕ ಬಂದರೂ ಅಂತರ್ಜಾಲವೆಂಬುದು ಮರೀಚಿಕೆಯಾಗಿಯೇ ಉಳಿಯಿತು.

೪ ನೇ ವರ್ಷದ ಆರಂಭದಲ್ಲಿ ಕಂಪನಿಗಳು "campus recruitment" ಗಾಗಿ ಕಾಲೇಜಿಗೆ ದಾಳಿ ಇಡಲು ಶುರು ಮಾಡಿದವು. ಅದಕ್ಕಾಗಿ resume ತಯಾರು ಮಾಡುವಾಗಲೇ ಹೊಳೆದದ್ದು - ನನಗೊಂದು ಈ-ಮಿಂಚೆ ವಿಳಾಸ (email-id) ಇಲ್ಲವೆಂದು!!! ಅಂದೇ ಕಾಲೇಜಿನ ಸರದಿಯಲ್ಲಿ ಕಾದು email-id create ಮಾಡಿದ್ದು. ಅದಾದ ನಂತರ ೧೫ ದಿವಸಕ್ಕೋ ತಿಂಗಳಿಗೋ ಒಮ್ಮೆ ಯಾವುದಾದರೂ ಸಂದೇಶ ಇದೆಯೇ ಅಂತ ಸರದಿಯಲ್ಲಿ ಕಾದು ಇಣುಕುತಿದ್ದೆ. ಇಷ್ಟಕ್ಕೆ ನನ್ನ್ನ ಅಂತರ್ಜಾಲ ಜ್ಞಾನ ಸೀಮಿತವಾಗಿತ್ತು.

ಹೀಗೆ ಕಾಲೇಜು ಶಿಕ್ಷಣ ಮುಗಿದು ಉದ್ಯೋಗಕ್ಕಾಗಿ ಚೆನ್ನೈ ತಲುಪಿದ ಮೇಲೂ ಕಚೇರಿಯ ಕೆಲಸ ಹಾಗು ಗೂಗಲ್ ನಲ್ಲಿ ಕೆಲವು ವಿಷಯದ ಹುಡುಕಾಟ ಬಿಟ್ಟರೆ ಇನ್ನೇನು ಹೆಚ್ಚಿನದ್ದು ತಿಳಿದಿರಲಿಲ್ಲ.

೨೦೦೮ರಲ್ಲಿ ಉದ್ಯೋಗ ನಿಮಿತ್ತ ಆಸ್ಟ್ರೇಲಿಯಾ ಪ್ರಯಾಣ. ಅಲ್ಲಿ ಮನೆಯಲ್ಲೇ ಅಂತರ್ಜಾಲ ಸೇವೆ ಇತ್ತು. ಮೊದಲ ದಿನ ನೋಡಿದ ದೃಶ್ಯ - ಗೆಳೆಯರೆಲ್ಲರ ಹತ್ತಿರ ಒಂದೊಂದು laptop. ಕಚೇರಿಯಿಂದ ಬಂದದ್ದೆ ತಡ, ಎಲ್ಲರೂ ತಂತಮ್ಮ laptop ಮುಂದೆ ವಿರಾಜಮಾನರಾಗಿಬಿಡುತ್ತ ಇದ್ದರು. ತಲೆಗೊಂದು headset, ಏನೋ ಪಿಸುಮಾತು ಇಲ್ಲಾಂದ್ರೆ ಒಂದೇ ಸಮನೆ ಕೀಲಿಮಣೆಯ ಕಟ ಕಟ ಶಬ್ದ. ಕುತೂಹಲದಿಂದ ಏನೆಂದು ವಿಚಾರಿಸಿದಾಗ ತಿಳಿದದ್ದು ಇದು "Gtalk / Yahoo messenger" ಮಹಿಮೆಯೆಂದು!!! ದೂರದೂರಿನಲ್ಲಿರುವ ಒಂಟಿ ಆತ್ಮಗಳಿಗೆ ತಮ್ಮ ಬಂಧು ಮಿತ್ರರ ಕ್ಷೇಮ ಸಮಾಚಾರ ತಿಳಿಯಲು ಇರುವ ಸಂಪರ್ಕ ಸೇತುವೆ.

ಮಾರನೆಯ ದಿನ ಸ್ನೇಹಿತರಿಂದ ಅದರ ಉಪಯುಕ್ತತೆ ಹಾಗು ಉಪಯೋಗಿಸುವ ವಿಧಾನ ತಿಳಿದು ಅಂತೂ ನಾನು "chat" ಮಾಡಲು ಶುರು ಮಾಡಿದೆ. ಆಗ ನಾನು "Gtalk" ನಲ್ಲಿ ಲಗತ್ತಿಸಿದ ಪ್ರಪ್ರಥಮ "status" ವಾಕ್ಯವೇ "Ready to chat with U". ನಿಧಾನವಾಗಿ ಒಂದೊಂದೇ ಮಿತ್ರರ email-id ಪಡೆದು ಅವರ ಜೊತೆ "chat" ಮಾಡಲು ಕಲಿತೆ. ಹೇಗೆ ಒಂದು ದಿನ ನಾಲ್ಕಾರು ಸ್ನೇಹಿತರ ಜೊತೆ ಏಕಕಾಲದಲ್ಲಿ ಚಾಟ್ ಮಾಡುತ್ತಿರಬೇಕಾದರೆ ನನಗೆ google talk ಏನೆಂದು ತಿಳಿಸಿಕೊಟ್ಟ ಮಿತ್ರ ತೆಗೆದ ಉದ್ಗಾರ - "google talk" ಏನೆಂದು ಕೇಳಿದವನ ಗಣಕ ಪರದೆಯ ತುಂಬಾ chat windowಗಳು!!!! ಆ ವರ್ಷದ ನನ್ನ ಹುಟ್ಟುಹಬ್ಬಕ್ಕ ಕೇಕ್ ತಂದ ಮಿತ್ರರು ಇದೆ ಸ್ಟೇಟಸ್ ಮೆಸ್ಸೇಜನ್ನು ಅದರ ಮೇಲೆ ಮುದ್ರಿಸಿದ್ದರು :-)
Chat status message on my B'day cake
ಹೀಗೆ ಆರಂಭವಾದ ನನ್ನ chatting ವಿದೇಶದಲ್ಲಿ ಇರುವಷ್ಟು ದಿನ ಸ್ನೇಹಿತರೊಡನೆ ಸಂಪರ್ಕವಿಟ್ಟುಕೊಳ್ಳಲು ಬಹಳ ಸಹಕಾರಿಯಾಯಿತು.

Friday 5 November, 2010

ಅಭಿವ್ಯಕ್ತಿ ಸ್ವಾತಂತ್ರ್ಯ - ಒಂದು ಜಿಜ್ಞಾಸೆ

"ಕಾಶ್ಮೀರ ಎಂದೂ ಭಾರತದ ಅಂಗವಾಗಿರಲಿಲ್ಲ" - ಇದು ಇತ್ತೀಚಿಗೆ ಅರುಂಧತಿ ರಾಯ್ ಎಂಬ "ಬುದ್ದಿಜೀವಿ" ನೀಡಿದ ಹೇಳಿಕೆ. ಇವರನ್ನು ಬಂದಿಸಬೇಕು ಎಂಬ ಕೂಗು ಕೇಳಿಬಂದಾಗ ಈ ಮಹಿಳಾಮಣಿ ತನ್ನ ನಿಲುವನ್ನು ಸಮರ್ಥಿಸಿ ನೀಡಿದ ಇನ್ನೊಂದು ಹೇಳಿಕೆ "ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಹತ್ವ ನೀಡದ ಭಾರತಕ್ಕೆ ಧಿಕ್ಕಾರ".

ಅಭಿವ್ಯಕ್ತಿ ಸ್ವಾತಂತ್ರ್ಯ - ಹಾಗೆಂದರೇನು?
        ಒಬ್ಬ ವ್ಯಕ್ತಿ ತನ್ನ ಅನಿಸಿಕೆಗಳನ್ನು ನಿರ್ಭಯವಾಗಿ ವ್ಯಕ್ತಪಡಿಸಲು ಇರುವ ಪರಿಸ್ಥಿತಿಯೇ "ಅಭಿವ್ಯಕ್ತಿ ಸ್ವಾತಂತ್ರ್ಯ". ಇದು ಒಂದು ಪ್ರಜಾಪ್ರಭುತ್ವ ರಾಷ್ಟದಲ್ಲಿ ಮಾತ್ರ ಸಾಧ್ಯ.

ಅಭಿವ್ಯಕ್ತಿ ಸ್ವಾತಂತ್ರ್ಯ v/sಹುಚ್ಚು ಹೇಳಿಕೆ!!!
         ಅಭಿವ್ಯಕಿ ಸ್ವಾತಂತ್ರ್ಯದಡಿಯಲ್ಲಿ ಪ್ರಸ್ತುತಪಡಿಸುವ ವಿಚಾರಗಳು ಸಮಾಜದ ಉನ್ನತಿಗೆ ಪೂರಕವಾಗಿರಬೇಕೇ ಹೊರತು ಮಾರಕವಗಿರಬರದು. ಆದರೆ ಇಂತಹ ಸ್ವಾತಂತ್ರ್ಯ ಇದೆ ಎಂದ ಮಾತ್ರಕ್ಕೆ ಮಾತಿನ ಮೇಲೆ ಹಿಡಿತವಿಲ್ಲದೆ ಹುಚ್ಚು ಹೇಳಿಕೆಗಳನ್ನು ನೀಡಿ ಪ್ರಚಾರ ಗಿಟ್ಟಿಸುವ ""ಸೆಕ್ಯುಲರ್" ಹಾಗು "ಬುದ್ಧಿಜೀವಿ" ಮಂದಿಯೇ ಇಂದು ನಮ್ಮಲ್ಲಿ ಬಹಳ ಮಂದಿ ಹುಟ್ಟಿಕೊಂಡಿದ್ದಾರೆ. ಯಾವುದೋ ಒಂದು ಪ್ರಶಸ್ತಿ ಅಥವಾ ಪುರಸ್ಕಾರ ಸಿಕ್ಕಿದೊಡನೆ ಹುಚ್ಚು ಹೇಳಿಕೆಗಳನ್ನು ನೀಡಲು ಗುತ್ತಿಗೆ ಪಡೆದಂತೆ ವರ್ತಿಸುವ ಮಂದಿ ಬಹಳ. ಇಂದಿನ ಪರಿಸ್ಥಿತಿ ಹೇಗಿದೆ ಎಂದರೆ - ಅತಿ ಶೀಘ್ರ ಹೆಸರು ಗಳಿಸಬೇಕಂದ್ರೆ, ಪತ್ರಿಕೆಯಲ್ಲಿ ತಮ್ಮ ಹೆಸರು ಬರಬೇಕಂದ್ರೆ ಮಾಡಬೇಕಾದ ಸರಳವಾದ ಕೆಲಸವೆಂದರೆ ಹಿಂದೂ ವಿರೋಧಿ ಹೇಳಿಕೆಯನ್ನು ನೀಡುವುದು ಅಥವಾ ನಕ್ಸಲ್/ಉಗ್ರವಾದಿಗಳ ಪರವಾಗಿ ಮಾತನಾಡುವುದು. ಇಂತ ಹೇಳಿಕೆಗೋಸ್ಕರ ಹಸಿವಿನಿಂದ ಕಾತರಿಸುವ ಮಾಧ್ಯಮಗಳು ಇವನ್ನೇ ದೊಡ್ಡ ಸುದ್ಧಿ ಮಾಡಿ "ಬ್ರೇಕಿಂಗ್ ನ್ಯೂಸ್" ಎಂಬ ಹಣೆಪಟ್ಟಿ ಕಟ್ಟಿ ಬಿತ್ತರಿಸುತ್ತವೆ. ಇಂತಹ ಅಸಂಬದ್ಧ ಹೇಳಿಕೆಗಳನ್ನು ನೀಡಿ ರಾಜಾರೋಷವಾಗಿ ಮೆರೆಯಬಹುದಾದ ಏಕೈಕ ರಾಷ್ಟ್ರವೆಂದರೆ ಭಾರತ ಮಾತ್ರವೇ ಇರಬೇಕು!!!!

ಅಭಿವ್ಯಕ್ತಿ ಸ್ವಾತಂತ್ರ್ಯ v/s Vote Bank ರಾಜಕಾರಣ
ಪ್ರಸಕ್ತ ರಾಜಕಾರಣದಲ್ಲಿನ ಅತಿ ಅಪಾಯಕಾರಿ ಪಿಡುಗೆಂದರೆ "VOTE BANK POLITICS". ಒಂದು ವರ್ಗದ ಮತದಾರರನ್ನು ತಮ್ಮ ಪಕ್ಷದ ಕಡೆ ಸೆಳೆಯುದಕ್ಕಾಗಿ ರಾಜಕಾರಣಿಗಳು ನಡೆದುಕೊಳ್ಳುವ ರೀತಿ ಬಹಳ ಅಸಹ್ಯ ಹುಟ್ಟಿಸುವಂತದ್ದು. ದೇಶದ ಅಭಿವ್ರದ್ದಿಯ ಚಿಂತನೆಯಲ್ಲಿ  ರಾಜಕೀಯ ಪಕ್ಷಗಳ ಭಿನ್ನಾಭಿಪ್ರಾಯ ಏನೇ ಇದ್ದರೂ ಇಂತಹ ಕೆಟ್ಟ ಕಾರ್ಯಗಳಲ್ಲಿ ಎಲ್ಲರೂ ಸಮಾನರು!!! ಈ ಮತ ಬ್ಯಾಂಕ್ ರಾಜಕಾರಣದಿಂದಾಗಿ ಎಷ್ಟೋ ಅಪರಾಧಗಳ ತೀರ್ಪು ದೇಶದ ನ್ಯಾಯಾಲಯದಲ್ಲಿ ಕೊಳೆಯುತ್ತಿದೆ. ದೇಶದ್ರೋಹದ ಆರೋಪದಡಿ ಬಂದಿತರಾದವರು ಆರಾಮವಾಗಿ ಸೆರೆಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಇದಕ್ಕೆ ಉದಾಹರಣೆ "ಆಫ್ಸಲ್ ಗುರು" ಹಾಗು "ಕಸಬ್" ಪ್ರಕರಣಗಳು. ಈ ದೇಶದ ಆಡಳಿತ ಕೇಂದ್ರವಾದ ಸಂಸತ್ ಭವನದ ದಾಳಿಯಲ್ಲಿ ಭಾಗಿಯಾದವನಿಗೆ ಮರಣದಂಡನೆ ವಿಧಿಸಲು ಸರಕಾರ ಹಿಂಜರಿಯುತ್ತಿದೆ. ಮುಂದೊಂದು ದಿನ ಇವನನ್ನು ಖುಲಾಸೆ ಮಾಡಿದರೂ ಆಶ್ಚರ್ಯವಿಲ್ಲ. ಅದೇ ಅಮೇರಿಕ ಅಥವಾ ಇನ್ಯಾವುದೇ ದೇಶವಾಗಿದ್ದರೆ ಯಾವಾಗಲೋ ಅದೊಂದು ಮುಗಿದ ಅಧ್ಯಾಯ ಆಗಿರುತ್ತಿತ್ತು.

ಭಾರತವು ಈ ಎಲ್ಲ ಕೊಳಕು ರಾಜಕಾರಣದಿಂದ ಮುಕ್ತವಾಗಿ, ದೇಶದ ಸಾರ್ವಭೌಮತ್ಯಕ್ಕೆ ಧಕ್ಕೆ ತರುವಂತ ಕಾರ್ಯ - ವಿಚಾರಗಳಿಗೆ ಪಕ್ಷಬೇಧ ಮರೆತು ಒಂದು ಧೃಡ ನಿರ್ಧಾರ ಕೈಗೊಳ್ಳುವ ಸಧೃಡ ರಾಷ್ಟ್ರವಾಗಲಿ ಎಂದು ಆಶಿಸೋಣ.

Monday 1 November, 2010

ಜೈ ಭುವನೇಶ್ವರಿ

ಎಲ್ಲರಿಗೂ ೫೪ನೇ  ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು.

Wednesday 6 October, 2010

ಚಿತ್ರಪಟ - ಆಸ್ಟ್ರೇಲಿಯಾದಲ್ಲಿ ಕಳೆದ ಒಂದೂವರೆ ವರ್ಷದ ಕೆಲವು ನೆನಪುಗಳು



ಕಾಲ : ೧೫ ಜೂನ್ ೨೦೦೮ - ೨೪ ಅಕ್ಟೋಬರ್ ೨೦೦೮ ಹಾಗು ೫ ಜೂನ್ ೨೦೦೯ - ೨೭ ಜೂನ್ ೨೦೧೦
ಕೆಲಸದ ನಿಮಿತ್ತ ಆಸ್ಟ್ರೇಲಿಯಾ ಎಂಬ ವಿಶಾಲ ದ್ವೀಪ ರಾಷ್ಟ್ರದಲ್ಲಿ ಕಳೆದ ಒಂದೂವರೆ ವರ್ಷದ ಕೆಲವು ನೆನಪುಗಳನ್ನು ಇಲ್ಲಿ ಚಿತ್ರದ ಮೂಲಕ ಪ್ರಸ್ತುತಪಡಿಸುತ್ತಿದ್ದೇನೆ. ಮನೆ ಹಾಗು ಕಚೇರಿ ಇದ್ದದ್ದು ಸಿಡ್ನಿ ಎಂಬ ವಾಣಿಜ್ಯ ನಗರಿಯಲ್ಲಿ. ಬಿಡುವಿದ್ದಾಗ ಸ್ನೇಹಿತರೊಡಗೂಡಿ ಸುತ್ತಮುತ್ತಲಿನ ಸ್ಥಳಗಳಿಗೆ ಭೇಟಿ. ಈ ಸಂಧರ್ಭದಲ್ಲಿ ಸೆರೆ ಹಿಡಿದ ಕೆಲವು ಕ್ಷಣಗಳು ಇಲ್ಲಿವೆ. ನೋಡಿ ಆನಂದಿಸಿ ಹಾಗೆಯೇ ನಿಮ್ಮ ಪ್ರತಿಕ್ರಿಯೆ ತಿಳಿಸಿ.

                        

Tuesday 5 October, 2010

ನಾನು ಓದಿದ ಪುಸ್ತಕ - "ಕವಲು"



ವಿ. ಸೂ: ಇಲ್ಲಿ ವ್ಯಕ್ತಪಡಿಸಿರುವುದು ಕೇವಲ ಒಬ್ಬ ಸಾಮಾನ್ಯ ಓದುಗನಾದ ನನ್ನ ಅನಿಸಿಕೆಗಳು. ತರ್ಕಬದ್ದವಾಗಿ ವಿಮರ್ಶಿಸಲು ನಾನೊಬ್ಬ ವಿಮರ್ಶಕನಲ್ಲ.



ಚಿತ್ರ ಕೃಪೆ - "ಗೂಗಲ್ ಇಮೇಜಸ್"
                                                        
                                                                  



"ಕವಲು" - ಕನ್ನಡ ಪುಸ್ತಕ ಕೊಳ್ಳುವವರಿಲ್ಲ ಎನ್ನುವ ಕೂಗಿನ ನಡುವೆ, ಬಿಡುಗಡೆಯಾಗಿ ತಿಂಗಳೊಳಗೆ ೧೦ ಬಾರಿ ಮರುಮುದ್ರಣಗೊಂಡ ಎಸ್ ಎಲ್ ಭೈರಪ್ಪ ನವರ  ಇತ್ತೀಚಿನ ಕೃತಿ. ಅವರ ಹಿಂದಿನ ಕೃತಿ "ಆವರಣ"ಕ್ಕಿಂತಲೂ ಅತಿ ಬೇಗನೆ ಬಿಸಿ ದೋಸೆಯಂತೆ ಮಾರಟವಾದ ಕೃತಿ. ಈ ಪುಸ್ತಕವನ್ನು ನನಗೆ ಪ್ರೀತಿಯಿಂದ ನೀಡಿದವರು ನನ್ನ ಮಿತ್ರ ಪ್ರಭುಪ್ರಸಾದ್.

ಸ್ತ್ರೀವಾದ, ಸ್ತ್ರೀ ಹಕ್ಕುಗಳ ರಕ್ಷಣೆಗಾಗಿ ಇರುವ ಕಾನೂನಿನ ಬ(ದುರ್ಬ)ಳಕೆ, ಪ್ರಚಾರ ಹಾಗು ಸ್ವಪ್ರತಿಷ್ಠೆಗಾಗಿ ನ್ಯಾಯ-ಅನ್ಯಾಯ ಪರಾಮರ್ಶಿಸದೇ ಹೋರಾಡುವ ಸ್ತ್ರೀವಾದಿಗಳು - ಇವೇ ಈ ಕಾದಂಬರಿಯ ಮೂಲ ಕಥಾ ವಸ್ತು.

ವಿವಾಹ ವಿಚ್ಚೇದನದಲ್ಲಿ ಮಹಿಳೆಗೆ ಅನ್ಯಾಯವಾಗದಂತೆ ಮತ್ತು ವರದಕ್ಷಿಣೆ ಪಿಡುಗಿನಿಂದ ಮಹಿಳೆಗೆ ರಕ್ಷಣೆ ನೀಡಲು ಇರುವ ಕಾನೂನಿನ ಬ(ದುರ್ಬ)ಳಕೆಯ ವ್ರತ್ತಾಂತ, ಇಂತಹ ಸಂಧರ್ಭಗಳಲ್ಲಿ ಲಂಚ ಗಿಟ್ಟಿಸಲು ಹಪತಪಿಸುವ ಆರಕ್ಷಕರು ಮುಂತಾದ ನಿರೂಪಣೆಗಳು ಚೆನ್ನಾಗಿ ಮೂಡಿ ಬಂದಿವೆ.

ತಂದೆಗೆ ಮಗಳ ಮೇಲಿನ ಮಮತೆ, ಒಡಹುಟ್ಟಿದ ತಂಗಿಯಲ್ಲದಿದ್ದರೂ ತನ್ನ ದೊಡ್ಡಪ್ಪನ ಮಗಳ ಮೇಲಿನ ಅಣ್ಣನ ಪ್ರೀತಿ, ತನ್ನ ಮೇಲೆ ವರದಕ್ಷಿಣೆ ಆರೋಪ ಹೊರಿಸಿ ಜೈಲಿಗಟ್ಟಿದ ಮಗ-ಸೊಸೆ ಮೇಲೆ ಎಷ್ಟೇ ಕೊಪವಿದ್ದರೂ, ಅವರ ಮಗಳು, ಅರ್ಥಾತ್ ತನ್ನ ಮೊಮ್ಮಗಳು ತೀರಿಕೊಂಡಾಗ ದುಃಖಪಡುವ ಅಜ್ಜಿಯಂತ ಜೀವ ಸಂಬಂಧದ ಭಾವ ಬೆಸುಗೆಗಳೂ ಕೂಡ ಇಷ್ಟವಾಗುತ್ತದೆ.

ಒಂದು ಸಮಕಾಲೀನ ಸಮಸ್ಯೆಯ ಸುತ್ತ ಪಾತ್ರಗಳನ್ನೂ ಹೆಣೆದು, ಓದುಗರನ್ನು ಈ ನೆಲದ ಕಾನೂನು, ಪ್ರಚಾರದ ಹೋರಾಟ, ಸುಖ ಸಂಸಾರಕ್ಕೆ ಬೇಕಾದ ಹೊಂದಾಣಿಕೆಗಳು ಹಾಗು ಜನರ ನೈತಿಕ-ಅನೈತಿಕ ವರ್ತನೆಗಳನ್ನು ವಿಶ್ಲೇಷಿಸುವಂತೆ ಮಾಡುವಲ್ಲಿ ಭೈರಪ್ಪನವರು ಯಶಸ್ವಿಯಾಗಿದ್ದಾರೆ.

ಈ ಕಾದಂಬರಿಯ ಕುರಿತು ಅನೇಕ ಪರ-ವಿರೋಧ ವಿಮರ್ಶೆಗಳು ವಿದ್ಯುನ್ಮಾನ ಹಾಗು ಪತ್ರಿಕಾ ಮಧ್ಯಮಗಲ್ಲಿ ಪ್ರಕಟವಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಇದರಂತೆ ಇನ್ನು ಹೆಚ್ಚು ಕೃತಿಗಳು ಓದುಗ ಮಹಾಶಯರ ವಿಶ್ಲೇಷಣೆ-ತರ್ಕಕ್ಕೊಳಪಟ್ಟು ಕನ್ನಡ ಸಾಹಿತ್ಯ ಲೋಕವು ಮುಂದುವರೆಯಲಿ.


ಲೇಖಕರು - ಎಸ್. ಎಲ್. ಭೈರಪ್ಪ
ವಿತರಕರು - ಸಾಹಿತ್ಯ ಭಂಡಾರ, ಬಳೇಪೇಟೆ ಬೆಂಗಳೂರು

Wednesday 8 September, 2010

ಆಸ್ಟ್ರೇಲಿಯಾನುಭವ


AU Parliament, Canberra
AU Flag








ಜೂನ್ ೨೦೧೦ - ಕೆಲಸದ ನಿಮಿತ್ತ ಆಸ್ಟ್ರೇಲಿಯಾದ ಸಿಡ್ನಿಗೆ ಕಾಲಿಟ್ಟು ಒಂದು ವಸಂತ ಪೂರೈಸಿದ ದಿನ. ಅಲ್ಲಿ ಕಳೆದ ಒಂದು ವರ್ಷದ ಅನುಭವಗಳನ್ನು ಮನಸ್ಸಿನ ಪುಟಗಳಿಂದ ಆರಿಸಿ ಇಲ್ಲಿ ವ್ಯಕ್ತಪಡಿಸುತ್ತಿದ್ದೇನೆ.

ಜೂನ್ ೨೦೦೯ - ಸಿಡ್ನಿಯ ಕಿಂಗ್ಸ್ ಫೋರ್ಡ್ ಸ್ಮಿತ್ ವಿಮಾನ ನಿಲ್ದಾಣಕ್ಕೆ Thai Airways ವಿಮಾನದಲ್ಲಿ ಬಂದಿಳಿಕೆ. ಅದು ಎರಡನೇ ಬಾರಿಗೆ ಸಿಡ್ನಿಗೆ ಬಂದ ಘಳಿಗೆ. ಇದಕ್ಕೂ ಮುಂಚೆ ೨೦೦೮ರಲ್ಲಿ ತಿಂಗಳ ಮಟ್ಟಿಗೆ ಇಲ್ಲಿದ್ದು ಹಿಂದಿರುಗಿದ್ದೆ. ಹಾಗಾಗಿ ಅಂದು ವಿಮಾನ ನಿಲ್ದಾಣದಲ್ಲಿ ಇಳಿದಾಗ ವಿದೇಶ ನೆಲ ಅನ್ನುವ ಅಂತ ಉತ್ಸುಕತೆ ಏನು ಇರಲಿಲ್ಲ.

ಉಳಿದುಕೊಳ್ಳುವ ಸ್ಥಳ ಮೊದಲೇ ಗೊತ್ತು ಮಾಡಿದ್ದರಿಂದ taxi ಹಿಡಿದು ನೇರವಾಗಿ ಮಧ್ಯರಾತ್ರಿಯಲ್ಲಿ ಮನೆ ಸೇರಿದೆ. ಬಾರಿಯ room mates ಭಾರತದ ವಿವಿಧ ಭಾಗಗಳಿಂದ ಬಂದವರಾಗಿದ್ದರುಅವರ ಕಿರು ಪರಿಚಯ:
ಪ್ರವೀಣ್ ಕುಮಾರ್ - ಹುಟ್ಟು ಮಲೆಯಾಳಿ, ಬೆಳೆದದ್ದು ಮದ್ರಾಸಿನಲ್ಲಿ. ತಿಂಡಿ ಪೋತ.
ದೀಪಕ್ ತಿವಾರಿ - ಬಿಹಾರಿ ಬಾಬು. ಬಹಳ ಮಾತಿನ ಮನುಷ್ಯ.
ಕಪಿಲ್ ಕುರ್ದಿಕರ್ - modern ಗೋವಾ ಹುಡುಗ. ಪಾರ್ಟಿ ಪ್ರಿಯ.
ಮನೋಜ್ ಖೋಲಿಯ - ೨೪ಗಂಟೆ ಸಪೋರ್ಟ್ ಕಾಲ್ (ಭಾರತದಲ್ಲಿ ಇರುವ ಪ್ರೇಯಸಿಯ ಜೊತೆ)
 ಎಲ್ಲರೂ TCSನವರಾಗಿದ್ದರಿಂದ ಅಲ್ಪ ಸ್ವಲ್ಪ ಪರಿಚಯವಿತ್ತು. ನಾನು ೫ನೆಯವನಾಗಿ ಇಲ್ಲಿಗೆ ಸೇರಿಕೊಂಡೆ.

ಬಾರಿಯ ಕೆಲಸದ ಉದ್ದೇಶ - ಒಂದು ಹೊಸ ಪ್ರಾಜೆಕ್ಟಿನ ಬಗ್ಗೆ ತಿಳಿದುಕೊಳ್ಳುವುದಕ್ಕಾಗಿ ನನ್ನನ್ನು ಇಲ್ಲಿಗೆ ಕಳುಹಿಸಿದ್ದರು.
ಅದು implementation ಸಮಯ. ನಾನು ಅದರ ಸಪೋರ್ಟ್ takeoverಗಾಗಿ ಬಂದಿದ್ದೆ. ಪ್ರಾಜೆಕ್ಟ್ ನಮ್ಮ clientige ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ದೊಡ್ಡ ಪ್ರಾಜೆಕ್ಟ್ - ಹಣ ಹಾಗು ಜನ - ಎರಡರಲ್ಲೂಹಾಗಾಗಿ ಇದರ ಸಪೋರ್ಟ್ handoverಗಾಗಿ ಬಹಳ ತಿಳಿದುಕೊಳ್ಳುವುದಿತ್ತು. ಹಂತ ಹಂತವಾಗಿ transition ತೆಗೊಂಡು ಅಂತೂ ಸಪೋರ್ಟ್ handover ಸುಸೂತ್ರವಾಗಿ ನೆರವೇರಿತು. ಮಧ್ಯೆ ನನ್ನ ಹಳೆ ಟೀಂ ಇಂದ ಒಬ್ಬಳು ಭಾರತಕ್ಕೆ ಹಿಂದಿರುಗಿದಳು. ಜಾಗ ಭರ್ತಿ ಮಾಡುವುದಕ್ಕಾಗಿ ಪುನಃ ಹಳೆ ಟೀಮಿಗೆ ಸೇರಿಕೊಂಡೆ. They got one more from offshore to fill in my current position.

ಇಲ್ಲಿಯ ಕಚೇರಿ ವಾತಾವರಣದ ಬಗ್ಗೆ in general ವಿವರಿಸುವುದಾದರೆ 
- ಮಂದಿ ವೇಳೆಗೆ ಸರಿಯಾಗಿ ಕಚೇರಿಗೆ ಬರುತ್ತಾರೆ ಹಾಗು ಸಂಜೆ ಸರಿಯಾದ ಸಮಯಕ್ಕೆ ಹಿಂದಿರುಗುತ್ತಾರೆ
- no stretched working hours
- ಕರಣ : ಕೆಲಸ ಮಾಡಲು ನಮ್ಮಂತ “services company” ಇದ್ದೆ ಇದೆಯಲ್ಲ :-)
- ನಾನು supportನಲ್ಲಿ ಇರುವ ಕಾರಣಕ್ಕೆ ನಿತ್ಯ ಕೆಲಸದ ವೇಳೆ ಅನೇಕ ಮಂದಿಯನ್ನು ಭೇಟಿಯಾಗುತ್ತಿರುತ್ತೇನೆ; ಒಬ್ಬೊಬ್ಬರು ಒಂದೊಂದು ತರ; ಕೆಲವರು ಬಹಳ ಚೆನ್ನಾಗಿ ಮಾತನಾಡಿಸುತ್ತಾರೆ ; ಇನ್ನು ಕೆಲವರ ಮುಖಭಾವ ನೋಡಬೇಕೆ? ಅನಿಸುತ್ತೆ.
- ಅವರ query ಗಳಿಗೆ ಉತ್ತರ ಸಿಕ್ಕಿದರೆ ಎಲ್ಲ ಖುಷಿ; ಸ್ವಲ್ಪ ತಡವಾದರೆ ಸೀದಾ escalation

ಅಂತೂ ಇಂತೂ ಹೆಚ್ಚೇನೂ ಬದಲಾವಣೆ ಇಲ್ಲದ - ಆದರೆ ದಿನದಿನಕ್ಕೆ workload ಹೆಚ್ಚಾಗುವ – support life ಸಾಗುತ್ತಿದೆ. ಅದರ ಬಗ್ಗೆ ವಿವರಿಸುವ ಅಂತ ವಿಶೇಷಗಳೇನಿಲ್ಲ.

ಇನ್ನು ಕಚೇರಿಯ ಹೊರಗೆ ಖಾಸಗಿ ಜೀವನದ ಕಥೆ-ವ್ಯಥೆ !!!
Weekdaysನಲ್ಲಿ ಕೆಲಸದ ಒತ್ತಡ ಜಾಸ್ತಿಯಾಗಿರುವ ಕಾರಣ ಶನಿವಾರ ಭಾನುವಾರದ ರಜಾದಲ್ಲಿ ಎಲ್ಲೂ ಹೊರ ಹೋಗುವ ಮನಸ್ಸಾಗುವುದೇ ಇಲ್ಲ - ಬರೀ ವಿಶ್ರಾಂತಿ ಸಮಯ. ಆದರೂ ಬಿಡುವು ಮಾಡಿಕೊಂಡು ಕೆಲವು ಯಾತ್ರ ತಾಣಗಳಿಗೆ ಭೇಟಿ ನೀಡುತ್ತಿದ್ದೆ. ಅದರ ಕೆಲವು ಸಂಕ್ಷಿಪ್ತ ಪರಿಚಯ Blogನಲ್ಲಿ ನೋಡಬಹುದುಹಬ್ಬ ಹರಿದಿನಗಳಂದು ಯಾರಾದರು ಫ್ಯಾಮಿಲಿ ಜೊತೆ ಇರುವ ಸ್ನೇಹಿತರ ಮನೆಯ ಊಟಕ್ಕೆ ಹಾಜರ್. ೨೦೦೯ನೇ ಇಸವಿಯ ಗಣೇಶ ಚತುರ್ಥಿ, ದೀಪಾವಳಿ ೨೦೧೦ನೇ ಇಸವಿಯ ಯುಗಾದಿ ಎಲ್ಲ ಸ್ನೇಹಿತರ ಮನೆಯ ಭೋಜನದ ಜೊತೆ ಆಚರಣೆ :-) ಇದು ೨ನೇ ದೀಪಾವಳಿ ನಾನು ಮನೆಯಿಂದ ದೂರವಿರುವುದು :-(

೨೦೧೦ನೇ ಹೊಸ ವರ್ಷಾಚರಣೆಯ ಸಂಭ್ರಮವನ್ನು ವೀಕ್ಷಿಸಲು ಸಿಡ್ನಿ OPERA HOUSEಗೆ ಹೋಗಿದ್ದೆ. Opera House ಹಾಗು Harbour Bridge ಮೇಲಿನಿಂದ ಮಧ್ಯರಾತ್ರಿಯ ವೇಳೆಗೆ ಸಿಡಿ ಮದ್ದಿನ ಪ್ರದರ್ಶನ ಏರ್ಪಡಿಸುತ್ತಾರೆ. ಪ್ರದರ್ಶನ ಬಹಳ ಸೊಗಸಾಗಿರುತ್ತೆ ಅಂತ ಕೇಳಲ್ಪಟಿದ್ದೆ. But it was not upto expectation.







Harbour Bridge
Opera House











ಬಾರಿಯ ಇನ್ನೊಂದು ವಿಶೇಷಾನುಭವ - ಸಿಡ್ನಿ ಕನ್ನಡ ಸಂಘದ ವತಿಯಿಂದ ಏರ್ಪಡಿಸಲ್ಪಟ್ಟ ಯುಗಾದಿ ಹಬ್ಬ. ಕನ್ನಡ ಭಜನೆಗಳು ಹಾಗು ಬೇವು-ಬೆಲ್ಲದ ಮಿಶ್ರಣ ಮನಸ್ಸಿಗೆ ಮುದ ನೀಡಿದವು. ದೂರದೂರಿನಲ್ಲಿ ಕನ್ನಡದ ಧ್ವನಿ ಕೇಳಿ ಆನಂದವಾಯಿತು.

ಇಲ್ಲಿನ ಜನ ಹಾಗು ಪ್ರದೇಶದ ಬಗ್ಗೆ:
ಆಸ್ಟ್ರೇಲಿಯಾದ ಜನಸಂಖ್ಯೆ ಕೇವಲ . ಕೋಟಿ; ನಮ್ಮ ಕರ್ನಾಟಕದ ಅರ್ಧ ಭಾಗ. ಆದರೆ ವಿಶಾಲ ಪ್ರದೇಶ. ಆದ್ದರಿಂದ infrastructure is not a problem at all; Resource to People ratio is too high. ಸರ್ಕಾರ ಕೂಡ ಜನರಿಗೆ ಅನೇಕಾನೇಕ ಸೌಲಭ್ಯಗಳನ್ನು ಒದಗಿಸಿದೆ. ಇಲ್ಲಿನ ಜನರು ಕೂಡ ಅಷ್ಟೇ, ಬಹಳ ಶಿಸ್ತಿನ ಜನ. ತಮ್ಮ ಮನೆಯ ಸ್ವಚ್ಚತೆಯನ್ನು ಕಾಪಾಡಿದಂತೆಯೇ ಸಾರ್ವಜನಿಕ ಆಸ್ತಿ ಹಾಗು ಸುತ್ತಮುತ್ತಲಿನ ಪ್ರದೇಶದ ಶುಚಿತ್ವವನ್ನು ಕಾಪಾಡಿಕೊಂಡಿದ್ದಾರೆ.
ಇದ್ದನ್ನು ನೋಡಿ John F. Kennedy ಆಡಿದಂತ ಒಂದು ಮಾತು ನೆನಪಾಗುತ್ತದೆ – “ask not what your country can do for you - ask what you can do for your country”.
ನಮ್ಮ ದೇಶದಲ್ಲಿ ಏನು ಚೆನ್ನಾಗಿಲ್ಲ ಅಂತ ಗೊಣಗುವ ಬದಲು ನಮ್ಮ ಕೈಲಾದ ಕೆಲಸ ಮಾಡಿ ದೇಶದ ಉದ್ಧಾರಕ್ಕೆ ಪ್ರಯತ್ನಿಸಬೇಕು!!
ಆದರೆ ಎಲ್ಲ ಮುಂದುವರಿದ ದೇಶಗಳಂತೆ ಇಲ್ಲಿಯೂ ಪ್ರಕ್ರತಿಯ ಸಂಪನ್ಮೂಲಗಳ ಅತಿಯಾದ (ದುರ್ಬ)ಳಕೆ ನಡೆಯುತ್ತಿದೆ. ಉದಾಹರಣೆಗೆ -  ಸಂಜೆ ಗಂಟೆಗೆ ಹೆಚ್ಚಿನ ಎಲ್ಲ ಕಚೇರಿ ಹಾಗು ಅಂಗಡಿಗಳು ಮುಚ್ಚುತ್ತವೆ. ಆದರೆ ಅಂಗಡಿಯೊಳಗಿನ ವಿದ್ಯುದ್ದೀಪ ೨೪ ಗಂಟೆಯೂ ಉರಿಯುತ್ತಿರುತ್ತದೆ. ವರ್ಷಕ್ಕೆ ಒಂದು ಬಾರಿ ಗಂಟೆ ಎಲ್ಲ ದೀಪಗಳನ್ನು ಆರಿಸಿ " EARTH HOUR" ಅಂತ ಆಚರಿಸುತ್ತಾರೆ. ಎಂಥಾ ವಿಪರ್ಯಾಸ!!!! ಅದೇ ದಿನಾಲೂ ಸಂಜೆ ವ್ಯವಹಾರದ ನಂತರ ಕೆಲಸ ಮಾಡಿದರೆ ಪ್ರಕ್ರತಿಯ ಮೇಲಿನ ದುಷ್ಪರಿಣಾಮಗಳನ್ನು ಅದೆಷ್ಟು ತಡೆಗಟ್ಟಬಹುದು.

ಭಾರತದ ನೆಂಟರಿಗೆ ಹಾಗು ಮಿತ್ರರಿಗೆ ದೂರವಾಣಿ ಕರೆ ಮಾಡಿದಾಗ ಯಾವಾಗಲೂ ಕೇಳಿ ಬರುವ ಒಂದು ಪ್ರಶ್ನೆ  - "RACISM issue ಹೇಗಿದೆ ಈಗ”. ಕಳೆದ ಒಂದು ವರ್ಷದಲ್ಲಿ ಅದೆಷ್ಟು ಬಾರಿ ವಿಷಯ ಭಾರತದ ಮಾಧ್ಯಮಗಳಲ್ಲಿ "BREAKING NEWS " ಆಗಿದೆ ಅನ್ನುವುದನ್ನು ನೋಡಿದರೆ ಭಾರತೀಯರಿಗೆ ಇದರ ಬಗ್ಗೆ ಅದೆಂತಹ ಕಲ್ಪನೆ ಇರಬಹುದು. ಇದರ ಬಗ್ಗೆ ವಿಶ್ಲೇಷಿಸುವುದಾದರೆ : ಹೌದು there is racism . ಅಂದ ಮಾತ್ರಕ್ಕೆ ಎಲ್ಲರೂ racist ಅಂತಲ್ಲ. ಇಲ್ಲಿ ಮಧ್ಯ-ಪೂರ್ವ ರಾಷ್ಟ್ರಗಳಿಂದ (particularly Lebanon ) ವಲಸೆ ಬಂದಿರುವ ಮಂದಿ ಬಹಳ ಇದ್ದಾರೆ. ಇವರೆಲ್ಲ ನಿರಾಶ್ರಿತ ಕೋಟದಲ್ಲಿ ಇಲ್ಲಿಗೆ ಬಂದು ಇಲ್ಲಿಯೇ settle ಆದವರು. ಹೆಚ್ಚಿನ ಗಲಾಟೆಗಳು ಇವರಿಂದಲೇ. ಇವರದ್ದು ಇಲ್ಲಿಯೂ ಅದೇ policy- ನಾವು ನಾಲ್ವರು; ನಮಗೆ ನಲವತ್ತು. ಆದ್ದರಿಂದ ಕೋಮಿನ ಹುಡುಗರು ಅಬ್ಬೇಪಾರಿಗಳಂತೆ  ಬೀದಿ ಸುತ್ತುತ್ತ ಗಲಾಟೆ ಮಾಡುತ್ತಿರುತ್ತಾರೆ. ಅದೂ ಭಾರತೀಯರನ್ನು ನೋಡಿದರೆ ಇವರಿಗೆ ಏನೋ ಒಂದು ತರ ಹೊಟ್ಟೆ ಉರಿ.  ಆದ್ದರಿಂದ ಸಂಜೆ ಕತ್ತಲಾದ ನಂತರ ಹೊರ ಹೋಗಬೇಕಾದರೆ ಗುಂಪಾಗಿ ಮನೆಯಿಂದ ಹೊರಡುತ್ತೇವೆ.
Native Australians – Euro Australians and Aboriginals are really good and friendly people.
ಇನ್ನೊಂದು ಪ್ರಮುಖವಾಗಿ ಕಂಡು ಬರುವ ಜನಾಂಗ - ಚೀನಾ ಹಾಗು ಇತರೆ “mandarin speaking” ದೇಶದ ಜನ. ಇವರು ಕೂಡ ನಿರುಪದ್ರವಿ ಹಾಗು ಸ್ನೇಹದಿಂದ ಬಾಳುವ ಜನ.
ನಂತರದಲ್ಲಿ ಭಾರತೀಯರು. ಭಾರತೀಯ ಸಮುದಾಯದವರು ಬಹಳಷ್ಟು ಮಂದಿ ಇರುವ ಕಾರಣಕ್ಕೆ ಅಲ್ಲಲ್ಲಿ ಭಾರತೀಯ ಉಪಹಾರಗ್ರಹಗಳು ಹಾಗು ದಿನಸಿ ಅಂಗಡಿ ಕಾಣಸಿಗುತ್ತವೆಆದ್ದರಿಂದ ಊಟ ತಿಂಡಿಯ ಚಿಂತೆ ಇಲ್ಲನಿರಾಶ್ರಿತರಾಗಿ ಶ್ರೀಲಂಕಾದಿಂದ ವಲಸೆ ಬಂದ ಬಹಳಷ್ಟು ಮಂದಿಯೂ ಇಲ್ಲಿದ್ದಾರೆ. 


Sydney Murugan Temple
ಅಲ್ಲದೆ ನಮ್ಮ ಮನೆಯ ಸಮೀಪದಲ್ಲಿ ಒಂದು ಸುಬ್ರಹ್ಮಣ್ಯ ಸ್ವಾಮಿ (ಮುರುಗ) ದೇವಸ್ಥಾನ ಇದೆ. Its maintained by Srilankan Tamilians. ವಾರದಲ್ಲಿ ಒಂದು ದಿನ ದೇವಸ್ಥಾನ ಭೇಟಿ.