Thursday 22 September, 2011

ಒಂದು ಸಿಗ್ನಲ್ ಕಥೆ-ವ್ಯಥೆ!!

ನಿನ್ನೆ ಕಚೇರಿಯಿಂದ ಹಿಂದಿರುಗುವಾಗ ನಾಯಂಡಹಳ್ಳಿ ಸಿಗ್ನಲ್ (ಮೈಸೂರು ರಸ್ತೆ ಹಾಗು ರಿಂಗ್ ರಸ್ತೆ ಕೂಡುವ ಸ್ಥಳ. ಬಹಳ ವಾಹನಗಳು ಓಡಾಡುವ junction. ಒಂದು ಬದಿಯ waiting time ಬರೋಬ್ಬರಿ ೬ ನಿಮಿಷ!!) ಬಳಿ ಕಂಡಂತಹ ದೃಶ್ಯಗಳು:

ದೃಶ್ಯ ೧:  ಒಬ್ಬಳು ಮಧ್ಯವಯಸ್ಸಿನ ಹೆಂಗಸು. ಕೊರಳಲ್ಲಿ ದೇವರ ಫೋಟೋ ನೇತಾಡಿಸಿಕೊಂಡಿದ್ದಾಳೆ. ಒಂದು ಕೈಯಲ್ಲಿ ಘಂಟೆ, ಇನ್ನೊಂದರಲ್ಲಿ ಅರಿಶಿನ-ಕುಂಕುಮ-ಚಿಲ್ಲರೆ ಕಾಸಿಂದ ಕೂಡಿರುವ ತಟ್ಟೆ. Traffic signal ನಲ್ಲಿ ನಿಂತಿರುವ ಗಾಡಿಗಳ ಬಳಿ ಸಾಗಿ ಘಂಟೆ ಬಾರಿಸಿ ತಟ್ಟೆ ಮುಂದಿಡುತ್ತಾಳೆ. ಹೀಗೆ ಗಾಡಿಯಿಂದ ಗಾಡಿಗೆ ಮುಂದುವರೆದಿತ್ತು ಅವಳ ಸವಾರಿ.

ದೃಶ್ಯ ೨:  ಅತ್ತ ಒಬ್ಬ ಬಾಲಕ. ವಯಸ್ಸು ೭ ರಿಂದ ೯ ವರ್ಷ. ಬೆನ್ನಲ್ಲಿ ಒಂದು ಚೀಲ. ಕೈಯಲ್ಲಿ ಆಟಿಕೆಗಳು ತುಂಬಿದ ಒಂದು ಸಣ್ಣ ಪೆಟ್ಟಿಗೆ. ಆಟಿಕೆ ಕೊಳ್ಳಿರೆಂದು ಗಾಡಿಯಿಂದ ಗಾಡಿಗೆ ಓಡಾಟ.

ದೃಶ್ಯ ೩:  ಅಲ್ಲೇ ಬದಿಯಲ್ಲಿ ಒಂದು ಸಣ್ಣ ಬೇಕರಿ. ಆಟಿಕೆ ಮಾರಟಕ್ಕೆ ಸಣ್ಣ ವಿರಾಮ ನೀಡಿದ ಬಾಲಕ ಅಂಗಡಿಯ ಬಳಿ ಬಂದು ಅಂಗಡಿಯವನಿಗೆ ಚಿಲ್ಲರೆ ಕಾಸನ್ನು ನೀಡಿದ. ಬಾಟಲಿಯಲ್ಲಿ ಶೇಕರಿಸಿಟ್ಟ ನೀರನ್ನು ಗಂಟಲೊಳಗೆ ಇಳಿಸುತ್ತಲಿದ್ದ. ಏನು ಕೊಳ್ಳುತ್ತಾನೆಂದು ಕುತೂಹಲದಿಂದ ನಾನು ನಿರೀಕ್ಷಿಸುತ್ತಿದ್ದೆ. ಅಂಗಡಿಯಾತ ಬಾಲಕನ ಕೈಗೆ ನೀಡಿದ್ದು ೨ ಗುಟ್ಕಾ ಪ್ಯಾಕೆಟ್!! ಕ್ಷಣಮಾತ್ರದಲ್ಲಿ ಒಂದು ಪೊಟ್ಟಣವನ್ನು ತೆರೆದ ಬಾಲಕ, ಅದನ್ನು ಬಾಯಿಗೆ ಏರಿಸಿಯೇ ಬಿಟ್ಟ!!

ದೃಶ್ಯ ೪:  ಹಲ್ಲು ಶುಚಿಗೊಳಿಸುವ ದ್ರಾವಣವನ್ನು ಮಾರುವ ಒಬ್ಬ ಹುಡುಗ. ಬಾಲಕ ಅವನ ಬಳಿ ಸಾಗಿ ಏನದು ಎಂದು ವಿಚಾರಿಸುತ್ತಾನೆ. ಬಳಿಕ 'ನನ್ನ ಹಲ್ಲಿಗೆ ಆಗುತ್ತದೆಯೇ?' ಎಂದು ವಿಚಾರಿಸುವಂತಿದೆ ಹುಡುಗನ ಹಾವ-ಭಾವ. ಅತ್ತ ತಿರುಗಿ 'ಅಮ್ಮ' ಎಂದು ಕೂಗುತ್ತಾನೆ. ಕತ್ತು ತಿರುಗಿಸಿ ನೋಡಿದರೆ, ದೇವರ ಫೋಟೋ ಹಿಡಿದಿರುವವಳೇ ಆ ಬಾಲಕನ ತಾಯಿ!! 

ಅಷ್ಟರಲ್ಲಿ ಸಿಗ್ನಲ್ ತೆರವಾಯಿತು. ನಾನಿದ್ದ ಬಸ್ಸು ಮುಂದೆ ಸಾಗಿತು.

ಈ ದೃಶ್ಯಾವಳಿಯನ್ನು ಏನೆಂದು ವರ್ಣಿಸಲಿ? ದುಡಿದು ತಿನ್ನುವ ಬದಲು ದೇವರ ಹೆಸರಲ್ಲಿ ಭಿಕ್ಷೆ ಬೇಡುವ ತಾಯಿ, ಶಾಲೆಗೆ ಹೋಗಬೇಕಾದ ವಯಸ್ಸಲ್ಲಿ ದುಶ್ಚಟಗಳಿಗೆ ಬಲಿಯಾಗಿ ಬೀದಿ ಬದಿ ವ್ಯಾಪಾರ ಮಾಡಿ ಜೀವಿಸುವ ಬಾಲಕ, ಕಣ್ಣೆದುರೇ ಮಗ ಕೆಟ್ಟ ಅಭ್ಯಾಸಗಳಿಗೆ ದಾಸನಾದರೂ ಬುದ್ಧಿ ಹೇಳದ ತಾಯಿ, ತಂಬಾಕು ಪದಾರ್ಥಗಳನ್ನು 18 ವರ್ಷದ ಕೆಳಗಿನವರಿಗೆ ಮಾರಬಾರದೆಂಬ ನಿಯಮವನ್ನು ಗಾಳಿಗೆ ತೂರಿರುವ ವ್ಯಾಪಾರಿ, ಇದನ್ನೆಲ್ಲಾ ಮೂಕ ಪ್ರೇಕ್ಷಕನಂತೆ ಕಂಡ ನಾನು!!!