Thursday 1 November, 2012

ಜುಗಾರಿ ಕ್ರಾಸ್

ಪೂರ್ಣಚಂದ್ರ ತೇಜಸ್ವಿಯವರ ಕಾದಂಬರಿಗಳು ನನಗೆ ಬಹ ಇಷ್ಟ ಆಗುತ್ತವೆ. ಕಾರಣ - ಪ್ರಕೃತಿಗೆ ಹತ್ತಿರವಾಗಿರುವ ಅವರ ಬರಹಗಳು ನಮಗೆ ಪ್ರಕೃತಿ ಮಡಿಲಿನಲ್ಲಿ ಓಡಾಡಿದ ಅನುಭವ ನೀಡುವಂತಿರುತ್ತದೆ.


"ಜುಗಾರಿ ಕ್ರಾಸ್" - ಇತ್ತೀಚಿಗೆ ಓದಿ ಮುಗಿಸಿದ ತೇಜಸ್ವಿಯವರ ಮತ್ತೊಂದು ಕಾದಂಬರಿ. ಕಾದಂಬರಿ ಬಗ್ಗೆ ಎರಡೇ ಪದಗಳಲ್ಲಿ ಹೇಳಬೇಕೆಂದರೆ - Simply Superb !!!
ಮೊದಲ ಪುಟದಿಂದ ಕೊನೆಯ ಪುಟದವರೆಗೂ ಹಿಡಿದಿಟ್ಟು ಕೂರಿಸುವಂತ ಕಾದಂಬರಿ. ಪುಸ್ತಕ ಕೆಳಗಿಡಲು ಮನಸ್ಸೇ ಬರವುದಿಲ್ಲ. ಮಲೆನಾಡಿನ ಕಾಡುಗಳಲ್ಲಿ ಸಾಗುವ ನಿಧಿ ಶೋಧನೆ, ಕಾಳ ದಂಧೆಯ ಕಥೆಯನ್ನು ಕೇವಲ 24 ಗಂಟೆಗಳ ಅವಧಿಯಲ್ಲಿ ಜರುಗುವ ಘಟನೆಗಳ ರೂಪದಲ್ಲಿ ಪ್ರಸ್ತುತಪಡಿಸಿದ್ದಾರೆ.
ಸಿನಿಮಾ ಮಾಡಲು ಒಳ್ಳೆಯ ಕಥಾವಸ್ತು. ಯಾಕೆ ನಮ್ಮ ಕನ್ನಡ ಸಿನಿಮಾ ನಿರ್ಮಾಪಕರಿಗೆ ಇಂತ ಕಥೆಗಳು ಕಾಣಿಸುವುದಿಲ್ಲವೋ - ತಿಳಿಯದು!! ಮಚ್ಚು ಲಾಂಗು ರೌಡಿಸಂ ಸಿನೆಮಾಗಳ ಬದಲಿಗೆ ಇಂತ ಸದಭಿರುಚಿಯ ಕಥೆಗಳನ್ನು ಸಿನಿಮಾ ಮಾಡಬಹುದಲ್ಲವೇ!!

ಲೇಖಕರು - ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಪ್ರಕಾಶಕರು - ಪುಸ್ತಕ ಪ್ರಕಾಶನ, ಸರಸ್ವತಿಪುರಂ, ಮೈಸೂರು

Sunday 16 September, 2012

"ಮಾತ್ರೆಗಳು" - ಶಾರೀರಿಕ ರೋಗಕ್ಕಲ್ಲ; ಜನರ/ಸಮಾಜದ ಮನಸ್ಥಿತಿಗೆ



ಬೀChiಯವರ ಸಣ್ಣ ಲೇಖನಗಳ ಸಂಗ್ರಹ. 1-2 ಪುಟಗಳು ಮೀರದ ಲೇಖನಗಳು. ಆದರೆ ಚುಟುಕು ಬರಹದಲ್ಲೇ ಸಮಾಜಕ್ಕೆ ಕುಟುಕು ನೀಡಿದ್ದಾರೆ!! ಆಡುವುದು ಒಂದು ಮಾಡುವುದು ಇನ್ನೊಂದು ಎನ್ನುವಂತೆ ಬದುಕುವ ಜನರ/ಸಮಾಜದ ಬಗ್ಗೆ ಹಾಸ್ಯ ಮಿಶ್ರಿತ ಲೇಖನಗಳು.

ಲೇಖಕರು - ಬೀChi
ಪ್ರಕಾಶಕರು - ಸಮಾಜ ಪುಸ್ತಕಾಲಯ, ಶಿವಾಜಿ ಬೀದಿ, ಧಾರವಾಡ

Monday 9 July, 2012

ಚಿತ್ರಸಂಗ್ರಹ - ಭಾಗ 3 (ತಟ್ಟಿರಾಯ)


ಮಹಿಷಮರ್ದಿನೀ ದೇವಸ್ಥಾನ, ನೀಲಾವರದ ತಟ್ಟಿರಾಯ



ಮಹಾಲಿಂಗೇಶ್ವರ ದೇವಸ್ಥಾನ, ಬ್ರಹ್ಮಾವರದ ತಟ್ಟಿರಾಯ

Saturday 7 July, 2012

ಚಿತ್ರಸಂಗ್ರಹ - ಭಾಗ 2 (ಕಡಲ ತೀರದಲ್ಲಿ)


ನಾ ಬಂದೆ!!

ನಾ ಹಿಡಿದೆ!!




ಹಕ್ಕಿಗಳು ಹಾರದಿದ್ದರೇನು? ನಾನಿದ್ದೇನಲ್ಲ!!



ಸೂರ್ಯ ಮುಳುಗುತ್ತಿದೆ ಒಂದಾದರೂ ಮೀನು ಸಿಕ್ಕೀತೇ ?

Thursday 5 July, 2012

ಚಿತ್ರಸಂಗ್ರಹ - ಭಾಗ 1

ಹೋದ ಭಾನುವಾರದ ಸಂಜೆಯ ಹೊತ್ತಿನಲ್ಲಿ,, ಮಾಡಲು ಬೇರೇನೂ ಕೆಲಸವಿಲ್ಲದ್ದಿದ್ದಾಗ ನನ್ನ ಛಾಯಾಚಿತ್ರಗಳ ಸಂಗ್ರಹಗಳನ್ನು ನೋಡುತ್ತಿದ್ದೆ.  ಮನಸ್ಸಿಗೆ ಇಷ್ಟವಾದ ಕೆಲವು ಚಿತ್ರಗಳು ಇಲ್ಲಿವೆ..

 ಮುಂಜಾನೆಯ ಮಂಜು


ನಾಚಿಕೆ ಮುಳ್ಳು

ಛಾಯಾಗ್ರಾಹಕ !

ಸುಂದರ ಕಡಲ ತೀರ

ಬಿಲ್ಲು!!

ಮುಸ್ಸಂಜೆ 

ನೋಟಕ್ಕೆ ನಿಲುಕದ ವಿಸ್ತಾರ !

BMTC ಭಾರ

Saturday 9 June, 2012

ಬಿಳಿಗಿರಿ ರಂಗನಾಥನ ಸನ್ನಿಧಿಯಲ್ಲಿ!!

ಬಹಳ ಸಮಯದ ನಂತರ (2 ವರ್ಷ!!) ಚಾರಣಕ್ಕೆ ಹೋಗಲು ಅವಕಾಶ ದೊರೆತದ್ದು! ಮನೆ ಕಡೆಯ ಕೆಲಸಗಳು ಹಾಗು ಇನ್ನಿತರೇ ಕಾರಣಗಳಿಂದಾಗಿ ಸಮಯ ಕೂಡಿಬಂದಿರಲಿಲ್ಲ. ಈ ಬೇಸಿಗೆಯಲ್ಲಿ, ಮಿತ್ರರೆಲ್ಲ ಒಡಗೂಡಿ ಬಿಳಿಗಿರಿ ರಂಗನ ಬೆಟ್ಟಕ್ಕೆ ಹೋಗಿ ಬಂದೆವು.

ಚೆಕ್ ಪೋಸ್ಟ್

ಬಿಳಿಗಿರಿ ರಂಗನ ಬೆಟ್ಟಕ್ಕೆ (B R Hills) ನನ್ನ ಪ್ರಥಮ ಭೇಟಿ.ನಾವು 6 ಜನ ಮಿತ್ರರು ಬೆಂಗಳೂರಿನಿಂದ ಒಂದು ಶನಿವಾರ ಮುಂಜಾನೆ ಪ್ರಯಾಣ ಹೊರಟೆವು. ಮದ್ದೂರು - ಮಳವಳ್ಳಿ - ಕೊಳ್ಳೇಗಾಲ ಮಾರ್ಗವಾಗಿ ಪ್ರಯಾಣ. ಬೆಳಗ್ಗೆ 9 ಗಂಟೆ ಹೊತ್ತಿಗೆ ಬೆಟ್ಟದ ಬುಡದಲ್ಲಿರುವ ಚೆಕ್ ಪೋಸ್ಟ್ ತಲುಪಿ, ಗಾಡಿಯ ವಿವರ  ದಾಖಲಿಸಿ ಮುಂದೆ ಸಾಗಿದೆವು.




ಚೆಕ್ ಪೋಸ್ಟ್ ಇಂದ ಮುಂದೆ ಸಾಗಿದಾಗ
ಅತ್ತ ದಟ್ಟ ಅಡವಿಯಲ್ಲದ, ಇತ್ತ ಕುರುಚಲು ಕಾಡಲ್ಲದ ಮಧ್ಯಮ ಗಾತ್ರದ ಅರಣ್ಯ ಪ್ರದೇಶ. ಚಾಮರಾಜನಗರ ಜಿಲ್ಲೆಯಲ್ಲಿರುವ ಈ ಕಾಡು ಪಶ್ಚಿಮ ಪೂರ್ವ ಘಟ್ಟಗಳ ಕೂಡು ಪ್ರದೇಶ. ನಮ್ಮ ಭೇಟಿಯ ಉದ್ದೇಶ - ಜಡ ಹಿಡಿದ ಮೈ ಮನಸ್ಸಿಗೆ ಒಂದಿಷ್ಟು ಉಲ್ಲಾಸ ತುಂಬುವುದು ಹಾಗು ಅದ್ರಷ್ಟವಿದ್ದರೆ ಕಾಡು ಪ್ರಾಣಿಗಳ ಫೋಟೋ ಕ್ಲಿಕ್ಕಿಸುವುದು!!

ಬೆಟ್ಟದ ಮೇಲಿರುವ "ಗಿರಿ ದರ್ಶಿನಿ"ಯಲ್ಲಿ ಇಡ್ಲಿ ಸಾಂಬಾರ್-ದೋಸೆ ಚಟ್ನಿ ಬರ್ಜರಿಯಾಗಿ ತಿಂದು ಗಂಗಾಧರೇಶ್ವರ  ಬೆಟ್ಟ ಹತ್ತಲು ಅಣಿಯಾದೆವು. ಸುಮಾರು 200 ಮೀಟರ್  ಎತ್ತರ ಇರಬಹುದೇನೋ...ಆದರೆ ಅದನ್ನು ಹತ್ತಬೇಕಾದರೆ ಆದ ಆಯಾಸ ಕಿಲೋಮೀಟರ್ನಷ್ತಿತ್ತು !! ಹತ್ತಬೇಕಾದರೆ ಆದ ಆಯಾಸ ಬೆಟ್ಟದ ಮೇಲೆ ಬೀಸುವ ತಂಗಾಳಿಗೆ ಹಾಗು ಸುತ್ತಲಿನ ವಿಹಂಗಮ ನೋಟಕ್ಕೆ ಮಾಯವಾದವು.

ಗಂಗಾಧರೇಶ್ವರ ಬೆಟ್ಟದ ಮೇಲಿನಿಂದ
ಬೀರ (ಸೋಲಿಗ -- ನಿಜವಾದ ಅರ್ಥದಲ್ಲಿಯೂ "Beer"a ನೇ !!... ಮುಂಜಾನೆಯೇ ತೀರ್ಥ ಸೇವನೆ ಆಗಿತ್ತು) ತಂದಿದ್ದ ಹಲಸಿನ ಹಣ್ಣು ತಿನ್ನುತ್ತ ಕೆಲ ಕಾಲ ಅಲ್ಲಿಯೇ ಕಳಿದೆವು. ಎರಡು ಗಿಡುಗಳು (ಹದ್ದು) ಬೇಟೆಗೆ ಹೊಂಚು ಹಾಕುತ್ತ ಎತ್ತರದಲ್ಲಿ ಹಾರುತ್ತಿದ್ದವು. ಕಡಿದಾದ ಇಳಿಜಾರಿನ ಮೂಲಕ ಬೆಟ್ಟ ಇಳಿದೆವು. ಇಂತಾ ಕಡಿದಾದ ದಾರಿಯಲ್ಲಿ ಹಿಂದಿನ ದಿನವಷ್ಟೇ ಆನೆಗಳು ಸಂಚರಿಸಿದ ಗುರುತಾಗಿ ರಾಶಿ ರಾಶಿ ಲದ್ದಿ ಬಿದ್ದಿದ್ದವು! ಆನೆ ಲದ್ದಿಗೆ ಮುತ್ತುವ   ಆನೆ ಸೊಳ್ಳೆಗಳ (ಹೆಸರಿಗೆ ತಕ್ಕಂತೆ ದೊಡ್ಡ ಗಾತ್ರದ ಸೊಳ್ಳೆಗಳು) ಭಯಂಕರವಾದ ಕಡಿತದ  ಅನುಭವವಾಯಿತು!!



ದೊಡ್ದಸಂಪಿಗೆ ಮರ
ಅಲ್ಲಿಂದ ಹಿಂತಿರುಗಿ ಮಧ್ಯಾಹ್ನ ದೊಡ್ದಸಂಪಿಗೆ ಮರವಿರುವಲ್ಲಿಗೆ ಭೇಟಿ. B R Hillsನಿಂದ K.ಗುಡಿಗೆ (ಕ್ಯಾತದೇವರ ಗುಡಿ) ಹೋಗುವ ಮಾರ್ಗದಲ್ಲಿ, ಮುಖ್ಯ ರಸ್ತೆಯಿಂದ 2 ಸುಮಾರು ಮೈಲಿ  ದೂರದಲ್ಲಿ ಅರಣ್ಯದೊಳಗೆ ಈ ಜಾಗವಿದೆ.
ಸುಮಾರು 800 -ವರ್ಷ ಹಳೆಯದಾದ ಕಾಡು ಸಂಪಿಗೆ ಮರ, ಅದರ ಬದಿಯಲ್ಲಿ ಹರಿಯುವ ನೀರಿನ ತೊರೆ, ಅರಣ್ಯ ವಾಸಿಗಳು ಪೂಜಿಸುವ ಮಹದೇಶ್ವರನ ನೂರಾರು ಕಲ್ಲುಗಳು - ಇವೆಲ್ಲಾ ಸೇರಿ ಜಾಗಕ್ಕೆ ಒಂದು ವಿಶಿಷ್ಟ ಕಳೆ ತುಂಬಿದೆ.  ಅಲ್ಲಿಗೆ ಹೋಗಿ ಬರುವಾಗ ಕಣ್ಣು - ಕಿವಿಯೆಲ್ಲ ಯಾವುದಾದರು ಪ್ರಾಣಿಯ ನಿರೀಕ್ಷೆಯಲ್ಲಿ ತೆರೆದುಕೊಂಡಿದ್ದವು.ಒಂದು ಉದ್ದನೆಯ ಹಾವು (ಯಾವುದೆಂದು ತಿಳಿಯಲಿಲ್ಲ) ಹಾಗು ಒಂದು ಪನ್ನಗ ತುರಾಯಿ (serpent eagle) ಕಾಣಿಸಿದ್ದು ಬಿಟ್ಟರೆ ಬೇರಾವ ಕಾಡು ಪ್ರಾಣಿಯ ದರ್ಶನವಾಗಲಿಲ್ಲ.

ದೊಡ್ದಸಂಪಿಗೆ ದಾರಿಯಲ್ಲಿ




ಅಲ್ಲಿಂದ ಹಿಂತಿರುಗಿ "ಗುರು ದರ್ಶಿನಿ"ಯಲ್ಲಿ ಊಟ ಮುಗಿಸಿದೆವು, ಸಂಜೆ 5 ಗಂಟೆಗೆ!!

ಪರಿಚಯಸ್ಥರೊಬ್ಬರ ಮನೆಯಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯಾಗಿತ್ತು. ಸ್ನಾನ ಮುಗಿಸಿ ಸ್ವಲ್ಪ ವಿಶ್ರಾಂತಿ ಪಡೆದು ಸಂಜೆ ಬಿಳಿಗಿರಿ ರಂಗನಾಥನ  ದರ್ಶನ ಮಾಡಿದೆವು. ಬೆಟ್ಟದ ತುದಿಯಲ್ಲಿರುವ ಹಳೆಯ ಪುಟ್ಟ ದೇವಸ್ಥಾನ. ಗುಡಿಯೊಳಗೆ ಲಕ್ಷಣವಾಗಿ ವಿರಾಜಮಾನರಾಗಿರುವ ಬಿಳಿಗಿರಿ ರಂಗನಾಥ. ಸಾಯಂಕಾಲದ ಮಂಗಳಾರತಿಯನ್ನು ವೀಕ್ಷಿಸಿ, ಪ್ರಸಾದ ಸ್ವೀಕರಿಸಿ ಹಿಂತಿರುಗಿ ಬಂದು ಮಲಗಿಕೊಂಡೆವು.





K  ಗುಡಿ ಮಾರ್ಗದಲ್ಲಿ
ಮರುದಿನ - ಭಾನುವಾರ- ಬೆಳಗ್ಗೆ ಬೇಗನೆ ಎದ್ದು (4.30ಕ್ಕೆ!) K. ಗುಡಿ ಕಡೆಗೆ ಪ್ರಯಾಣ. B R Hills ನಿಂದ ಸುಮಾರು 16km ದೂರದಲ್ಲಿದೆ. ಬೆಳಕು ಇನ್ನೂ ಹರಿದಿರಲಿಲ್ಲ. Low beam ನಲ್ಲಿ headlight ಹಾಕಿಕೊಂಡು ಕಾರಿನಲ್ಲಿ ನಿಧಾನವಾಗಿ ಚಲಿಸಿದೆವು. ಬೆಳಗ್ಗಿನ ಜಾವವಾದ್ದರಿಂದ ಪ್ರಾಣಿಗಳು ಕಾಣಿಸುವ ಸಾಧ್ಯತೆ ಇದ್ದವು. ದಾರಿಯಲ್ಲಿ ಒಂದು ಕಡೆ ಆನೆಗಳು ಮರದ ಕೊಂಬೆಗಳನ್ನು ಮುರಿಯುವ ಸದ್ದು ಕೇಳಿಸುತ್ತಿತ್ತು. ನಾವಿದ್ದಲಿಂದ ನೂರಿನ್ನೂರು ಮೀಟರ್ ದೂರದಲ್ಲಿ. ಆದರೆ ಕತ್ತಲೆ ಇದ್ದ ಕಾರಣ ಹಾಗು ಪೊದೆಗಳು ಬೆಳೆದ್ದಿದ್ದರಿಂದ ಕಣ್ಣಿಗೆ ಕಾಣಿಸಲಿಲ್ಲ. ಕಾರಿಳಿದು ಹತ್ತಿರ ಹೋಗುವ ಧೈರ್ಯ ಮಾಡಲಿಲ್ಲ!! ಅಲ್ಲಿಂದ ಸ್ವಲ್ಪ ಮುಂದೆ ಸಾಗಿದಾಗ ರಸ್ತೆ ಮಧ್ಯದಲ್ಲಿ ಒಂಟಿ ಕರಡಿಯ ದರ್ಶನ! ಕಾರಿನ ಬೆಳಕು ಬಿದ್ದೊಡನೆಯೇ ಅದು ಅಲ್ಲಿಂದ ಕಾಲ್ಕಿತ್ತಿತು! ಫೋಟೋ ತೆಗೆಯಲು ಆಗಲಿಲ್ಲ. ನಿಧಾನವಾಗಿ ಸೂರ್ಯ ಉದಯಿಸತೊಡಗಿದ. ಮುಂದೆ K ಗುಡಿಯ ದಾರಿಯಲ್ಲಿ ಕಾಡು ಕುರಿ, ಜಿಂಕೆ, ಕಡವೆ, ಕಾಡು ಕೋಳಿ, ಕಾಡು ಹಂದಿ ಕಾಣಿಸಿದವು. K ಗುಡಿಯಲ್ಲಿ ಅರಣ್ಯ ಇಲಾಖೆ ವತಿಯಿಂದ ಸಫಾರಿ ವ್ಯವಸ್ಥೆ ಇದೆ. ಒಬ್ಬರಿಗೆ 400 ರೂ. ಸಫಾರಿ ಪ್ರಯಾಣದಲ್ಲಿ ಕಾಡು ನಾಯಿಯನ್ನು ಕಂಡೆವು. ಸಫಾರಿ ಮುಗಿಸಿ ಬೆಂಗಳೂರು ಕಡೆ ಹೊರಟೆವು. ಹುಲಿ, ಚಿರತೆ ನೋಡುವ ಸೌಭಾಗ್ಯ ದೊರೆಯಲಿಲ್ಲ. ಆದರೆ 2 ದಿನ ದೇಹಕ್ಕೆ ಒಳ್ಳೆ ವ್ಯಾಯಾಮ.

ಅಲ್ಲಿ ಗಮನಿಸಿದ ಕೆಲವು ವಿಷಯಗಳು:
1) ಸೋಲಿಗರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನದಲ್ಲಿ ಸರಕಾರ ಎಡವಿದಂತಿದೆ. ಊರೆಲ್ಲ ಕುಡುಕರೇ !
2) ಸುಮಾರು ಜನ ಮಾನಸಿಕ ಅಸ್ವಸ್ಥರು ಅಲ್ಲಿ ಕಾಣಿಸಿದರು. ನನ್ನ ಮಿತ್ರ ಹೇಳಿದ ವಿಷಯ - ಬೆಂಗಳೂರು ಹಾಗು ಇತರೆ ಊರಿನವರು ಮಾನಸಿಕ ಅಸ್ವಸ್ಥರನ್ನು ತಂದು B R Hills ಸುತ್ತ  ಬಿಟ್ಟು ಹೋಗುತ್ತಾರೆಂದು. ಇದು ಎಷ್ಟು ನಿಜವೋ ತಿಳಿಯದು. ನಿಜವೇ ಆದರೆ ಅದೊಂದು ಕೆಟ್ಟ ಬೆಳವಣಿಗೆ. ತಡೆಗಟ್ಟಲು ಕ್ರಮ ಕೈಗೊಳ್ಳಬೇಕು.
3) ಬಿಳಿಗಿರಿ ರಂಗನಾಥನ ಸನ್ನಿಧಿಯ ಸುತ್ತಮುತ್ತ ಮೂಲ ಸೌಕರ್ಯಗಳ ಕೊರತೆ. ದೇವಾಲಯದ ಸುತ್ತಮುತ್ತಲಿನ ಆವರಣವನ್ನು ಇನ್ನಷ್ಟು ಶುಚಿಗೊಳಿಸಬೇಕು ಹಾಗು ನಿಯಮ ಪಾಲಿಸದವರಿಗೆ ದಂಡ ವಿಧಿಸಬೇಕು.
4) ತೋಟಗಾರಿಕೆ ಇಲಾಖೆಯ "ಧನ್ವಂತರಿ ಪ್ರಾತ್ಯಕ್ಷಿಕೆ" ವನ ಪಾಲು ಬಿದ್ದಿದೆ. ಬೀಗ ಜಡಿದು ಅದೆಷ್ಟು ಸಮಯವಾಯಿತೋ !


Monday 6 February, 2012

ಟಿಕೇಟು ಕೊಡ್ತೀನಿ!!

ವಸುಧೇಂದ್ರರವರು ಬರೆದ "ಹರಿಚಿತ್ತ ಸತ್ಯ" ಎನ್ನುವ  ಕಾದಂಬರಿ ಓದುತ್ತಿದ್ದೆ. ಕಥೆಯಲ್ಲಿ ಒಬ್ಬ ಬಸ್ಸು ನಿರ್ವಾಹಕ ಹಾಗು ಒಬ್ಬಳು ಹೆಂಗಸಿನ ನಡುವಿನ ಸಂಭಾಷಣೆ ಓದಿ ನಗು ತಡೆಯಲಾಗಲಿಲ್ಲ. ಅದು ಈ ರೀತಿ ಇದೆ :-

ದಾರಿ ಮಧ್ಯದಲ್ಲಿ ಬಸ್ಸು ಕೆಟ್ಟು ನಿಂತಿತ್ತು. ನಿರ್ವಾಹಕ ಪ್ರಯಾಣಿಕರನ್ನು ಬಸ್ಸಿನಿಂದ ಇಳಿಯಲು ಕೇಳಿಕೊಳ್ಳುತ್ತಿದ್ದ.
ನಿರ್ವಾಹಕ: ಇಳೀರಮ್ಮೋ ಇಳೀರಿ. ಬಸ್ಸಿಗೆ ಜಾಕ್ ಹಾಕಬೇಕು.
ಹೆಂಗಸು: ಮತ್ತೆ ಬಸ್ಸು ಶುರುವಾದಾಗ ನಮಗೆ ಕೂಡೋದಕ್ಕೆ ಸೀಟು ಕೊಡ್ತೀ ಅಲ್ಲೇನಪ್ಪೋ? ನಿಂತುಗೊಂಡು ಹೋಗೋ ಹಂಗೆ ಮಾಡಬೇಡ. ನಂಗೆ ಮೊದಲೇ ಮೊಣಕಾಲು ನೋವು. ಇಲ್ಲ ಅಂದ್ರೆ ನಾನು ಬಸ್ಸು ಇಳಿಯಾಕಿನೇ ಅಲ್ಲ ನೋಡು.
ನಿರ್ವಾಹಕ: ಅಜ್ಜಿ ಸೀಟಿಗ್ಯಾಕೆ ಚಿಂತಿ ಮಾಡ್ತೀ ಬಿಡು. ಎಲ್ಲೂ ಇಲ್ಲ ಅಂದ್ರೆ ಡ್ರೈವರ್ ಗೆ ಸೀಟು ಬಿಟ್ಟು ಕೊಡಲಿಕ್ಕೆ ಹೇಳ್ತೀನಿ. ಆತ ನಿಂತುಗೊಂಡು ಬರ್ತಾನೆ.
ಅಜ್ಜಿ: ಹಂಗೇ ಆಗ್ಲೇಳೋ ನಮ್ಮಪ್ಪ. ದಿನಾ ಎಲ್ಲರಿಗೂ ಟಿಕೇಟು ಕೊಟ್ಟೂ ಕೊಟ್ಟೂ ನಿನಗೂ ಬ್ಯಾಸರ ಬಂದಿರ್ತದೆ. ಈವತ್ತು ನಾನು ನಿಂಗೆ ಟಿಕೇಟು ಕೊಡ್ತೀನಿ ತೊಗೋ !!