Tuesday 25 October, 2011

ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು!!

ಗೂಡು ದೀಪ

ಹೆಸರೇ ಸೂಚಿಸುವಂತೆ "ದೀಪಾ"ವಳಿಯನ್ನು ಬೆಳಕಿನ ಹಬ್ಬವಾಗಿ ಆಚರಿಸೋಣ; ಸದ್ಧಿನ ಪಟಾಕಿಯನ್ನು ಸಿಡಿಸದಿರುವ ಮೂಲಕ ಶಬ್ಧ ಮಾಲಿನ್ಯಕ್ಕೆ ಕಡಿವಾಣ ಹಾಕೋಣ.

ಎಲ್ಲರ ಬಾಳಿನ ಕತ್ತಲೆಯನ್ನು ಕಳೆದು ಬೆಳಕು ನೀಡಲಿ ಎಂಬ ಹಾರೈಕೆಗಳು!!

Wednesday 19 October, 2011

ಪುಸ್ತಕ ಪರಿಚಯ - "ಕಾಡು ಪ್ರಾಣಿಗಳ ಜಾಡಿನಲ್ಲಿ"




ಈ ಪುಸ್ತಕದ ಲೇಖಕರು - ಕೆ. ಉಲ್ಲಾಸ ಕಾರಂತ. ಇವರು ಹುಲಿ ಹಾಗು ಅದಕ್ಕೆ ಸಂಬಂಧಿಸಿದ ಸಂರಕ್ಷಣೆಯ ವಿಷಯಗಳಲ್ಲಿ ಪ್ರಪಂಚದ ಅಗ್ರಮಾನ್ಯ ಪರಿಣತರಲ್ಲಿ ಒಬ್ಬರು.

ಈ ಪುಸ್ತಕದಲ್ಲಿ ಕರ್ನಾಟಕದ ಕಾಡು ಪ್ರಾಣಿಗಳ ಸಂಕ್ಷಿಪ್ತ ಪರಿಚಯವಿದೆ. ಹಾಗೆಯೇ ಅರಣ್ಯ ನಾಶದ ಕಾರಣ ಮತ್ತು ಪರಿಣಾಮಗಳನ್ನು ವಿವರವಾಗಿ ನೀಡಲಾಗಿದೆ. ವೈಜ್ಞಾನಿಕ ತಳಹದಿಯ ಮೇಲೆ ಹೇಗೆ ಕಾಡು ಹಾಗು ವನ್ಯಜೀವಿಗಳನ್ನು ರಕ್ಷಿಸಿ ಬೆಳೆಸಬೇಕೆಂಬ ಬಗೆಗೂ ಚಿಂತಿಸಲಾಗಿದೆ.

ಇತ್ತೀಚಿಗೆ ಆನೆಗಳು ನಾಡಿಗೆ ನುಗ್ಗಿ ಬೆಳೆ ನಾಶ ಮಾಡುತ್ತದೆ ಎಂದು ಎಲ್ಲೆಲೂ ಸುದ್ಧಿ. ಸರ್ಕಾರ ಒಂದಿಷ್ಟು ಪರಿಹಾರ ಅಂತ ನೀಡಿ ಮರೆತು ಬಿಡುತ್ತದೆ. ಕೆಲವು ಕಡೆ ಅದೂ ಇಲ್ಲ !! ಆದರೆ ಅವು ಯಾಕೆ ಕಾಡು ಬಿಟ್ಟು ನಾಡಿಗೆ ಬರುತ್ತವೆ, ಮುಂದೆ ಹೀಗಾಗದಂತೆ ಏನು ಮಾಡಬೇಕು ಎಂದು ಯೋಚಿಸುವ ಬುದ್ಧಿ ನಮ್ಮ ಯಾವ ಸರ್ಕಾರಕ್ಕೂ ಇಲ್ಲ !!

ಲೇಖಕರು - ಕೆ. ಉಲ್ಲಾಸ ಕಾರಂತ
ವಿತರಕರು - ನವಕರ್ನಾಟಕ ಪ್ರಕಾಶನ

Tuesday 18 October, 2011

ಪುಸ್ತಕ ಪರಿಚಯ - "ಹಳ್ಳಿಯ ಚಿತ್ರಗಳು"


ಗೊರೂರು ರಾಮಸ್ವಾಮಿ ಅಯ್ಯಂಗಾರರು ತಮ್ಮ ಜೀವನದಲ್ಲಿ ಕಂಡ/ಅನುಭವಿಸಿದ ಕೆಲವು ಪ್ರಸಂಗಗಳಿಗೆ ಅಕ್ಷರದ ರೂಪ ನೀಡಿದ್ದಾರೆ. ಹಳ್ಳಿಯ ಜೀವನದ ದೃಶ್ಯಗಳಿಗೆ ನವಿರಾದ ಹಾಸ್ಯದ ಲೇಪನ ನೀಡಿ ಇಲ್ಲಿ ಪ್ರಸ್ತುತಪಡಿಸಿದ್ದಾರೆ.

ಲೇಖಕರು - ಗೊರೂರು ರಾಮಸ್ವಾಮಿ ಅಯ್ಯಂಗಾರ್
ವಿತರಕರು - ಐಬಿಎಚ್ ಪ್ರಕಾಶನ, ಬೆಂಗಳೂರು

Saturday 15 October, 2011

ಪುಸ್ತಕ ಪರಿಚಯ - "ಬಂಗಾರದ ಕತ್ತೆ"



ಬೀChiಯವರ ಕೃತಿ. ಹೆಸರೇ ಸೂಚಿಸುವಂತೆ ಮಡಿವಂತರಿಗೆ "Chi" ಎನ್ನಿಸಬಹುದಾದ ಲೇಖಕ. ಒಂದು ನಾಟಕ ಕಂಪನಿಯಲ್ಲಿ ನಡೆಯುವ ವಿದ್ಯಮಾನಗಳನ್ನು ಬೀChiಯವರು ಹಾಸ್ಯಮಿಶ್ರಿತ ಬರಹದ ರೂಪದಲ್ಲಿ ಪ್ರಸ್ತುತಪಡಿಸಿದ್ದಾರೆ. ಇದರಲ್ಲಿ ಉಪಯೋಗಿಸಿರುವ ಕೆಲ ಪದಗಳು ಕೆಲವು ಜನರಿಗೆ ಹಿಡಿಸಲಿಕ್ಕಿಲ್ಲ. ಆದರೆ ಇದೇ ಬೀChiಯವರ ಶೈಲಿ. ಅದನ್ನು ಒಪ್ಪುವುದು ಬಿಡುವುದು ಓದುಗರಿಗೆ ಬಿಟ್ಟದ್ದು.

ಕಥೆಯ ಆರಂಭ ಹೀಗೆ --
"ವತ್ಸಾ, ಧ್ರುವಕುಮಾರ! ನಾನು ನಿನ್ನ ಘೋರ ತಪಸ್ಸಿಗೆ ಮೆಚ್ಚಿದ್ದೇನೆ, ಬೇಕಾದ ವರವನ್ನು ಕೇಳು."
"ಬಾಕಿ ಇರುವ ನನ್ನ ಮೂರು ತಿಂಗಳ ಸಂಬಳವನ್ನು ಕೊಟ್ಟು ಬಿಡಿ, ಮಹರಾಯರೇ. ನಾನು ಊರಿಗೆ ಹೋಗುವುದುಂಟು, ದಮ್ಮಯ್ಯ." 


ಲೇಖಕರು - ಬೀChi
ವಿತರಕರು - ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ

Friday 14 October, 2011

ಪುಸ್ತಕ ಪರಿಚಯ - "ಗ್ರಹಣ"


ಒಮ್ಮೆ ಕೈಗೆತ್ತಿಕೊಂಡರೆ ಕೆಳಗಿಡುವ ಮನಸ್ಸೇ ಆಗುವುದಿಲ್ಲ. ಭೈರಪ್ಪನವರ ಕೃತಿಗಳೇ ಹಾಗೆ!!

"ಗ್ರಹಣ" ಇದು ೧೯೭೨ರಲ್ಲಿ ಮೊದಲ ಮುದ್ರಣ ಕಂಡ ಕೃತಿ. ಸೂರ್ಯಗ್ರಹಣದ ವೈಜ್ಞಾನಿಕ ವಿಶ್ಲೇಷಣೆಯೊಂದಿಗೆ ಪ್ರಾರಂಭವಾಗುವ ಕಥೆ ಮುಂದೆ ಧರ್ಮ-ಅಧರ್ಮದ ವಿಷಯವಾಗಿ ಸಾಗುತ್ತದೆ. ಮಠ, ಮಂದಿರ, ದೇವರು, ಜ್ಞಾನಯೋಗ, ಭಕ್ತಿಯೋಗ, ಕರ್ಮಯೋಗ, ಸನ್ಯಾಸ, ಗೃಹಸ್ಥಾಶ್ರಮ, ಸಾಮಾಜಿಕ ಕಾರ್ಯ - ಹೀಗೆ ನಾನಾ ವಿಷಯಗಳ ಬಗ್ಗೆ ಪರ-ವಿರುದ್ಧ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾ ಕಥೆ ಸಾಗುತ್ತದೆ. ಓದುಗರನ್ನು ಅರೆಕ್ಷಣವಾದರು ಈ ಬಗ್ಗೆ ಚಿಂತಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ.

ಆಯ್ದ ಒಂದೆರಡು ಸಾಲುಗಳು -- " ಅಲ್ಲಿ ಗ್ರಹಣವಾಗುಕ್ಕೂ ಇಲ್ಲಿ ಹಂಡೆಗೆ ಹುಳಿ ಹಾಕುಕ್ಕೂ ಏನು ಸಂಬಂಧ ಅಂತಲೇ?"
"ಎಷ್ಟೋ ಸಲ ಬರೀ ಸೈನ್ಸ್ ಎಲ್ಲತಕ್ಕೂಉತ್ತರ ಹೇಳುಲ್ಲ. ಗ್ರಹಣ ಹಿಡಿದ ವರ್ಷ ಮಾವಿನಹಣ್ಣುಗಳೆಲ್ಲ ಕೊಳೆತು ಹೋಗುತ್ತೆ, ಯಾಕೆ ಹೇಳಿ?"

ಲೇಖಕರು - ಎಸ್. ಎಲ್. ಭೈರಪ್ಪ
ವಿತರಕರು - ಸಾಹಿತ್ಯ ಭಂಡಾರ, ಬಳೇಪೇಟೆ ಬೆಂಗಳೂರು

Monday 10 October, 2011

ಪುಸ್ತಕ ಪರಿಚಯ - "ಮೂಜನ್ಮ"



ಶಿವರಾಮ ಕಾರಂತರ "ಗೊಂಡಾರಣ್ಯ"ದಂತೆ ಇದೂ ಒಂದು ರಾಜಕೀಯ ವಿಷಯಾಧಾರಿತ ಕಾದಂಬರಿ. "ಗೊಂಡಾರಣ್ಯ"ದಲ್ಲಿ ವಿವಿಧ ಪಕ್ಷಗಳ ನಡುವಿನ ಗುದ್ದಾಟವನ್ನು ಚಿತ್ರಿಸಿದರೆ, ಇಲ್ಲಿ ಒಬ್ಬ ಪ್ರಭಾವಿ ರಾಜಕೀಯ ವ್ಯಕ್ತಿಯ ಬದುಕೇ ಕಾದಂಬರಿಯ ಕಥಾವಸ್ತು.

ಸ್ವಾತಂತ್ರ್ಯಾನಂತರದ ಸುಮಾರು ೧೫ ವರ್ಷಗಳ ಕಾಲ ಹಾಗಲವಾಡಿ ಸಂಸ್ಥಾನದ "king maker" ಆಗಿ ಬದುಕಿ, ಅಳಿದ ಚಂದ್ರಕಾಂತ ಗುಪ್ತ ಎನ್ನುವ ವ್ಯಕ್ತಿ ಇಲ್ಲಿ ಮುಖ್ಯ ಪಾತ್ರದಾರಿ. ಇವರ ಅಭಿಮಾನಿಗಳಲ್ಲೊಬ್ಬರಾದ ಪತ್ರಕರ್ತ ರಂಗನಾಥ ರಾಯರು ದಿವಂಗತ ಚಂದ್ರಕಾಂತ ಗುಪ್ತರ ಜೀವನ ಚರಿತ್ರೆ ಬರೆಯಲು ತೊಡಗುತ್ತಾರೆ. ಇದಕ್ಕಾಗಿ ಮಾಹಿತಿ ಸಂಗ್ರಹಿಸಲು ದಿವಂಗತ ಗುಪ್ತರ ಮಡದಿ, ನಳಿನಿಯೊಡನೆ ಸಮಾಲೋಚಿಸಿದಾಗ ಅವರಿಗೆ ಸಿಗುವುದು ಕೇವಲ ಇತ್ತೀಚಿನ ಹತ್ತಿಪತ್ತು ವರ್ಷಗಳ ವಿವರ. ಇದಕ್ಕೂ ಹಿಂದಿನ ಮಾಹಿತಿಯನ್ನು ಕಲೆ ಹಾಕಲು ಇಬ್ಬರೂ ಜೊತೆಗೂಡಿ ಊರೂರು ಸುತ್ತಿ ಗುಪ್ತರ ಪೂರ್ವ ಚರಿತ್ರೆಯನ್ನು ಕೆದಕುತ್ತ ಹೋದಂತೆ ಅವರ ಇನ್ನೆರಡು ರೂಪಗಳು ಅನಾವರಣಗೊಳ್ಳುತ್ತವೆ.

ಈ ರೀತಿ ಮೂರು ಸ್ಥಳಗಳಲ್ಲಿ, ಮೂರು ವಿವಿಧ ಕಾಲಮಾನಗಳಲ್ಲಿ, ಮೂರು ಅವತಾರದಂತೆ ಬದುಕಿದ ವ್ಯಕ್ತಿಯ ಜೀವನವೇ "ಮೂಜನ್ಮ". ಈ ಮೂಜನ್ಮದ ವಿವರಗಳನ್ನು ಓದಿ ಆನಂದಿಸಿ!!

"ಮೂಜನ್ಮ"ದಿಂದ ಆಯ್ದ ಒಂದೆರಡು ಸಾಲುಗಳು --- "ವ್ಯಕ್ತಿ ಸ್ವಾರ್ಥಕ್ಕೆ ಇರಿಸಿಕೊಂಡಂಥ ಒಂದು ಭವ್ಯ ಹೆಸರೆಂದರೆ - ದೇಶಸೇವೆಯೆಂಬ ಪದ. ಅದು ಹಳಸಿದರೆ 'ಜನತಾ ಸೇವೆ' ಎಂದರಾಯಿತು. ಅದರ ಸಾಧನೆಗಾಗಿ ದಿನ ದಿನ ಹೊಸ ತಂತ್ರ, ಮಂತ್ರಗಳನ್ನು ಹುಡುಕುತ್ತಲೇ ಇದ್ದಾರೆ. ಯಾವ ಮಂತ್ರವನ್ನು ಜನಪ್ರಿಯವನ್ನಾಗಿ ಮಾಡಿದರೆ ದೇಶದ ಮೂಢಮತಿಗಳು 'ಭಜ ಗೋವಿಂದಂ' ಎಂದು ಭಕ್ತಿಯಿಂದ ಕಣ್ಮುಚ್ಚಿ  ಕುಳಿತಿರುತ್ತಾರೆ - ಎಂಬ ಉಪಾಯ ಹುಡುಕುತ್ತಿದ್ದಾರೆ."

ಲೇಖಕರು - ಡಾ|| ಕೆ.ಶಿವರಾಮ ಕಾರಂತ
ವಿತರಕರು - ಸಪ್ನ ಬುಕ್ ಹೌಸ್

ಪುಸ್ತಕ ಪರಿಚಯ

ನಾನು ಓದಿದ ಕೆಲವು ಪುಸ್ತಕಗಳ ಕಿರುಪರಿಚಯ ಒಂದೊಂದಾಗಿ ಇಲ್ಲಿ ನೀಡುತ್ತಿದ್ದೇನೆ. ಇದು ಆ ಪುಸ್ತಕದ ಬಗೆಗಿನ ವಿಮರ್ಶೆ ಅಲ್ಲ, ಕೇವಲ BLOG ಓದುವವರ ಆಸಕ್ತಿಗಾಗಿ ಕೆಲವು ಮಾಹಿತಿ ಅಷ್ಟೇ. ಕನ್ನಡ ಪುಸ್ತಕಗಳ ಪರಿಚಯ ಇತರರಿಗೆ ದೊರೆಯಲಿ ಎಂಬ ಆಶಯದೊಂದಿಗೆ!!