Wednesday 6 October, 2010

ಚಿತ್ರಪಟ - ಆಸ್ಟ್ರೇಲಿಯಾದಲ್ಲಿ ಕಳೆದ ಒಂದೂವರೆ ವರ್ಷದ ಕೆಲವು ನೆನಪುಗಳು



ಕಾಲ : ೧೫ ಜೂನ್ ೨೦೦೮ - ೨೪ ಅಕ್ಟೋಬರ್ ೨೦೦೮ ಹಾಗು ೫ ಜೂನ್ ೨೦೦೯ - ೨೭ ಜೂನ್ ೨೦೧೦
ಕೆಲಸದ ನಿಮಿತ್ತ ಆಸ್ಟ್ರೇಲಿಯಾ ಎಂಬ ವಿಶಾಲ ದ್ವೀಪ ರಾಷ್ಟ್ರದಲ್ಲಿ ಕಳೆದ ಒಂದೂವರೆ ವರ್ಷದ ಕೆಲವು ನೆನಪುಗಳನ್ನು ಇಲ್ಲಿ ಚಿತ್ರದ ಮೂಲಕ ಪ್ರಸ್ತುತಪಡಿಸುತ್ತಿದ್ದೇನೆ. ಮನೆ ಹಾಗು ಕಚೇರಿ ಇದ್ದದ್ದು ಸಿಡ್ನಿ ಎಂಬ ವಾಣಿಜ್ಯ ನಗರಿಯಲ್ಲಿ. ಬಿಡುವಿದ್ದಾಗ ಸ್ನೇಹಿತರೊಡಗೂಡಿ ಸುತ್ತಮುತ್ತಲಿನ ಸ್ಥಳಗಳಿಗೆ ಭೇಟಿ. ಈ ಸಂಧರ್ಭದಲ್ಲಿ ಸೆರೆ ಹಿಡಿದ ಕೆಲವು ಕ್ಷಣಗಳು ಇಲ್ಲಿವೆ. ನೋಡಿ ಆನಂದಿಸಿ ಹಾಗೆಯೇ ನಿಮ್ಮ ಪ್ರತಿಕ್ರಿಯೆ ತಿಳಿಸಿ.

                        

Tuesday 5 October, 2010

ನಾನು ಓದಿದ ಪುಸ್ತಕ - "ಕವಲು"



ವಿ. ಸೂ: ಇಲ್ಲಿ ವ್ಯಕ್ತಪಡಿಸಿರುವುದು ಕೇವಲ ಒಬ್ಬ ಸಾಮಾನ್ಯ ಓದುಗನಾದ ನನ್ನ ಅನಿಸಿಕೆಗಳು. ತರ್ಕಬದ್ದವಾಗಿ ವಿಮರ್ಶಿಸಲು ನಾನೊಬ್ಬ ವಿಮರ್ಶಕನಲ್ಲ.



ಚಿತ್ರ ಕೃಪೆ - "ಗೂಗಲ್ ಇಮೇಜಸ್"
                                                        
                                                                  



"ಕವಲು" - ಕನ್ನಡ ಪುಸ್ತಕ ಕೊಳ್ಳುವವರಿಲ್ಲ ಎನ್ನುವ ಕೂಗಿನ ನಡುವೆ, ಬಿಡುಗಡೆಯಾಗಿ ತಿಂಗಳೊಳಗೆ ೧೦ ಬಾರಿ ಮರುಮುದ್ರಣಗೊಂಡ ಎಸ್ ಎಲ್ ಭೈರಪ್ಪ ನವರ  ಇತ್ತೀಚಿನ ಕೃತಿ. ಅವರ ಹಿಂದಿನ ಕೃತಿ "ಆವರಣ"ಕ್ಕಿಂತಲೂ ಅತಿ ಬೇಗನೆ ಬಿಸಿ ದೋಸೆಯಂತೆ ಮಾರಟವಾದ ಕೃತಿ. ಈ ಪುಸ್ತಕವನ್ನು ನನಗೆ ಪ್ರೀತಿಯಿಂದ ನೀಡಿದವರು ನನ್ನ ಮಿತ್ರ ಪ್ರಭುಪ್ರಸಾದ್.

ಸ್ತ್ರೀವಾದ, ಸ್ತ್ರೀ ಹಕ್ಕುಗಳ ರಕ್ಷಣೆಗಾಗಿ ಇರುವ ಕಾನೂನಿನ ಬ(ದುರ್ಬ)ಳಕೆ, ಪ್ರಚಾರ ಹಾಗು ಸ್ವಪ್ರತಿಷ್ಠೆಗಾಗಿ ನ್ಯಾಯ-ಅನ್ಯಾಯ ಪರಾಮರ್ಶಿಸದೇ ಹೋರಾಡುವ ಸ್ತ್ರೀವಾದಿಗಳು - ಇವೇ ಈ ಕಾದಂಬರಿಯ ಮೂಲ ಕಥಾ ವಸ್ತು.

ವಿವಾಹ ವಿಚ್ಚೇದನದಲ್ಲಿ ಮಹಿಳೆಗೆ ಅನ್ಯಾಯವಾಗದಂತೆ ಮತ್ತು ವರದಕ್ಷಿಣೆ ಪಿಡುಗಿನಿಂದ ಮಹಿಳೆಗೆ ರಕ್ಷಣೆ ನೀಡಲು ಇರುವ ಕಾನೂನಿನ ಬ(ದುರ್ಬ)ಳಕೆಯ ವ್ರತ್ತಾಂತ, ಇಂತಹ ಸಂಧರ್ಭಗಳಲ್ಲಿ ಲಂಚ ಗಿಟ್ಟಿಸಲು ಹಪತಪಿಸುವ ಆರಕ್ಷಕರು ಮುಂತಾದ ನಿರೂಪಣೆಗಳು ಚೆನ್ನಾಗಿ ಮೂಡಿ ಬಂದಿವೆ.

ತಂದೆಗೆ ಮಗಳ ಮೇಲಿನ ಮಮತೆ, ಒಡಹುಟ್ಟಿದ ತಂಗಿಯಲ್ಲದಿದ್ದರೂ ತನ್ನ ದೊಡ್ಡಪ್ಪನ ಮಗಳ ಮೇಲಿನ ಅಣ್ಣನ ಪ್ರೀತಿ, ತನ್ನ ಮೇಲೆ ವರದಕ್ಷಿಣೆ ಆರೋಪ ಹೊರಿಸಿ ಜೈಲಿಗಟ್ಟಿದ ಮಗ-ಸೊಸೆ ಮೇಲೆ ಎಷ್ಟೇ ಕೊಪವಿದ್ದರೂ, ಅವರ ಮಗಳು, ಅರ್ಥಾತ್ ತನ್ನ ಮೊಮ್ಮಗಳು ತೀರಿಕೊಂಡಾಗ ದುಃಖಪಡುವ ಅಜ್ಜಿಯಂತ ಜೀವ ಸಂಬಂಧದ ಭಾವ ಬೆಸುಗೆಗಳೂ ಕೂಡ ಇಷ್ಟವಾಗುತ್ತದೆ.

ಒಂದು ಸಮಕಾಲೀನ ಸಮಸ್ಯೆಯ ಸುತ್ತ ಪಾತ್ರಗಳನ್ನೂ ಹೆಣೆದು, ಓದುಗರನ್ನು ಈ ನೆಲದ ಕಾನೂನು, ಪ್ರಚಾರದ ಹೋರಾಟ, ಸುಖ ಸಂಸಾರಕ್ಕೆ ಬೇಕಾದ ಹೊಂದಾಣಿಕೆಗಳು ಹಾಗು ಜನರ ನೈತಿಕ-ಅನೈತಿಕ ವರ್ತನೆಗಳನ್ನು ವಿಶ್ಲೇಷಿಸುವಂತೆ ಮಾಡುವಲ್ಲಿ ಭೈರಪ್ಪನವರು ಯಶಸ್ವಿಯಾಗಿದ್ದಾರೆ.

ಈ ಕಾದಂಬರಿಯ ಕುರಿತು ಅನೇಕ ಪರ-ವಿರೋಧ ವಿಮರ್ಶೆಗಳು ವಿದ್ಯುನ್ಮಾನ ಹಾಗು ಪತ್ರಿಕಾ ಮಧ್ಯಮಗಲ್ಲಿ ಪ್ರಕಟವಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಇದರಂತೆ ಇನ್ನು ಹೆಚ್ಚು ಕೃತಿಗಳು ಓದುಗ ಮಹಾಶಯರ ವಿಶ್ಲೇಷಣೆ-ತರ್ಕಕ್ಕೊಳಪಟ್ಟು ಕನ್ನಡ ಸಾಹಿತ್ಯ ಲೋಕವು ಮುಂದುವರೆಯಲಿ.


ಲೇಖಕರು - ಎಸ್. ಎಲ್. ಭೈರಪ್ಪ
ವಿತರಕರು - ಸಾಹಿತ್ಯ ಭಂಡಾರ, ಬಳೇಪೇಟೆ ಬೆಂಗಳೂರು