Saturday 11 December, 2010

"ಗೊಂಡಾರಣ್ಯ"ವೆಂಬ ರಾಜಕೀಯ ದೊಂಬರಾಟ

ಮುಖ ಪುಟ
"ರಾಜಕೀಯ" - ಅಂದು. ಇಂದು, ಎಂದೆಂದೂ ಕೊಳೆತು ನಾರುವ ವ್ಯವಸ್ಥೆ - ಶಿವರಾಮ ಕಾರಂತರ "ಗೊಂಡಾರಣ್ಯ"ವೆಂಬ ಕಾದಂಬರಿಯನ್ನು ಓದಿ ಮುಗಿಸಿದಾಗ ಈ ರೀತಿ ಯೋಚಿಸದೆ ಬೇರೆ ದಾರಿ ಇರಲಿಲ್ಲ!!!

೧೯೫೪ರಲ್ಲಿ ಮೊದಲ ಪ್ರಕಟಣೆ ಕಂಡ ಈ ಕಾದಂಬರಿಯಲ್ಲಿ ನಿರೂಪಿಸಿರುವ ಸ್ಥಿತಿಗತಿಗಳು ಸರ್ವಕಾಲಕ್ಕೂ ಅನ್ವಯಿಸುತ್ತದೆ. ಚುನಾವಣೆಯಲ್ಲಿ ಗೆಲ್ಲಲು ಉಪಯೋಗಿಸುವ ವಾಮ ಮಾರ್ಗ, ಮತದಾರರಿಗೆ ಹಣದ ಆಮಿಷ, ಮಂತ್ರಿಮಂಡಲ ರಚನೆಯಲ್ಲಿನ ಭಿನ್ನಾಭಿಪ್ರಾಯ, ಸ್ವಜನ ಪಕ್ಷಪಾತ, ಜಾತಿ ರಾಜಕಾರಣ - ಇವೆಲ್ಲವನ್ನೂ ನಿರೂಪಿಸಿದ ರೀತಿಯು ಇಂದಿನ ರಾಜಕೀಯ ಸ್ಥಿತಿಗೆ ಹಿಡಿದ ಕನ್ನಡಿಯಂತಿದೆ. ಸ್ವಾತಂತ್ರ್ಯ ಸಿಕ್ಕ ೭ಳೇ ವರ್ಷಕ್ಕೆ ಪ್ರಕಟವಾದ ಈ ಕಾದಂಬರಿಯಲ್ಲಿನ ರಾಜಕೀಯ ಹುಳುಕನ್ನು ಓದಿದರೆ, ಭಾರತದ ರಾಜಕಾರಣ ಈ ಎಲ್ಲ ಕೊಳಕುಗಳಿಂದ ಮುಕ್ತಗೊಳ್ಳಲು ಇನ್ನೆಷ್ಟು ಸಮಯ ಬೇಕಾಗುವುದೋ ಎಂದೆನಿಸದೆ ಇರದು.

ಸ್ವಾತಂತ್ರ್ಯಾನಂತರದ ೧೫ ವರ್ಷಗಳಲ್ಲಿ ನಡೆಯುವ ವಿದ್ಯಮಾನಗಳೇ ಇದರ ಕಥಾಮೂಲ. ಇಂದಿನ ಪರಿಸ್ಥಿತಿಗೆ ತುಲನೆ ಹಾಕಿದರೆ ಈ ಕಾದಂಬರಿಯ ಕಥಾವಸ್ತು ಅಂತ ವಿಶೇಷದ್ದಲ್ಲ. ಆದರೆ ಆಶ್ಚರ್ಯವಾಗುವುದೇನಂದರೆ, ಸ್ವಾತಂತ್ರ್ಯ ಸಿಕ್ಕ ಬೆನ್ನಲ್ಲೇ ಹುಟ್ಟಿಕೊಂಡ (ಅಥವಾ ಮೊದಲೇ !!!) ಅಧಿಕಾರ/ಹಣದ ಆಸೆ. ದೇಶದ ಹಿತಕ್ಕಿಂತ ಸ್ವಹಿತವೆ ಮುಖ್ಯವೆನ್ನುವ ರಾಜಕೀಯ/ಅಧಿಕಾರಿ ವರ್ಗ. ಅಂದು ನಿಜವಾಗಿ ಹೀಗಿತ್ತೋ ಅಥವಾ ಇದು ಮುಂದೆ ರಾಜಕೀಯ ಕುಲಗೆಡಬಹುದು ಎನ್ನುವ ಕಾರಂತರ ದೂರದೃಷ್ಟಿ ಫಲವೋ - ನಾ ತಿಳಿಯೆ. ಇಷ್ಟೇ ಅಲ್ಲದೆ ಒಂದು "ರಾಷ್ಟ್ರೀಯ ಪಕ್ಷ", ಒಂದು "ಸ್ಥಳೀಯ ಪಕ್ಷ" ಹಾಗು ದೇಶದ ಅಭಿವೃದ್ಧಿ ಚಿಂತನೆ ಬಿಟ್ಟು, ಹೊರ ದೇಶಗಳಿಂದ ಎರವಲು ಪಡೆದ communism ಸಿದ್ಧಾಂತಕ್ಕೆ ಜೋತು ಬಿದ್ದಿರುವ "ವಾಮ ಪಕ್ಷ" - ಇವುಗಳ ನಡುವಿನ ತಿಕ್ಕಾಟ ಸಾಮಾನ್ಯ ಜನರ ರಾಜಕೀಯ ಜ್ಞಾನವನ್ನು ಪರೀಕ್ಷಿಸುವಂತಿದೆ.

ಅಂತೂ ಈ ಪುಸ್ತಕ ಎಲ್ಲೂ ಸಪ್ಪೆಗೂಡದೆ ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ. ಸಮಯವಿದ್ದರೆ ಒಮ್ಮೆ ಓದಿ.

ಕೊನೆಯಲ್ಲಿ: ನಮ್ಮ ಇಂದಿನ ಕರ್ನಾಟಕದ ಸರಕಾರದ ಧ್ಯೇಯ ವಾಕ್ಯ "ಅಭಿವೃದ್ಧಿಯೇ ಆಡಳಿತ ಮಂತ್ರ".
ಜನ ಕೇಳುವ ಪ್ರಶ್ನೆ, ಯಾರ ಅಭಿವ್ರದ್ಧಿ - ರಾಜ್ಯದ್ದೋ, ಕುಟುಂಬದ್ದೋ ?

ಲೇಖಕರು - ಡಾ|| ಕೆ. ಶಿವರಾಮ ಕಾರಂತ
ವಿತರಕರು - ಸಪ್ನ ಬುಕ್ ಹೌಸ್

2 comments:

  1. ಉತ್ತಮ ಕಾದಂಬರಿಗೊಂದು ಆಸಕ್ತಿ ಮೂಡಿಸುವ ಪರಿಚಯ ಒದಗಿಸಿದ್ದೀರಿ ಸರ್.

    ಗೊಂಡಾರಣ್ಯ - ಇದು 'ಗುಂಡಾರಣ್ಯ' ಎಂದಾದರೆ ವಾಸ್ತವಕ್ಕೆ ಹತ್ತಿರವೆನಿಸುತ್ತದೇನೋ?

    (ರಾಜಕಾರಣಿಗಳ) ಅಭಿವೃದ್ಧಿಯೇ ಆಡಳಿತ ಮಂತ್ರ - ಪ್ರಸ್ತುತ ಬಿ.ಜೆ.ಪಿ. ಸರ್ಕಾರದ ಮೂಲಮಂತ್ರ?!

    ReplyDelete
  2. ನಮಸ್ಕಾರ ಪ್ರಶಾಂತ್, ಸರಿಯಾಗಿ ಹೇಳಿದಿರಿ :-)
    ಇಂದಿನ ಸ್ಥಿತಿ "ಗೂಂಡಾರಣ್ಯ"ವೇ !!!
    ಚುನಾವಣೆಗೆ ನಿಲ್ಲಲು ಪ್ರಥಮ ಮಾನದಂಡ - ಯಾರ ಮೇಲೆ ಎಷ್ಟು ಕ್ರಿಮಿನಲ್ ಕೇಸ್ ಗಳಿವೆ ಎಂದು!!!!!

    ReplyDelete