"ಚೀಂವ್ ಚೀಂವ್" - ನಿರುಪದ್ರವಿ, ಪುಟಾಣಿ ಗುಬ್ಬಚ್ಚಿಯ ಕೂಗು!!
ಈ ಶಬ್ದ ಕಿವಿಗೆ ಬೀಳದೆ ಅದೆಷ್ಟು ವರ್ಷಗಳಾಗಿತ್ತೋ? ಕಾರ್ಕಳವೆಂಬ ಸಣ್ಣ ಊರನ್ನು ಬಿಟ್ಟು ಬೆಂಗಳೂರು ಮಹಾನಗರಿಗೆ ಬಂದದ್ದು ೨೦೦೦ನೇ ಇಸವಿಯಲ್ಲಿ. ಆಗ ನಾವಿದ್ದ ಶ್ರೀನಗರದಲ್ಲಿ ಎಲ್ಲೊ ಒಂದೊಂದು ಸಲ ಇವು ಕಾಣಸಿಗುತ್ತಿದ್ದವು. ನಂತರದ ಕೆಲವೇ ದಿನಗಳಲ್ಲಿ ಸುಳಿವೇ ಇಲ್ಲದಂತೆ ಮಾಯವಾದವು!
ಈಗ ವರ್ಷದ ಕೆಳಗೆ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಹೋದಾಗ ಇವು ಮತ್ತೆ ಕಣ್ಣಿಗೆ ಬಿದ್ದವು. ಪಕ್ಕದಲ್ಲಿರುವ ಉಪಹಾರಗೃಹದ ಮೇಜಿನ ಬಳಿ ಬಿದ್ದಿದ್ದಂತಹ ಚೂರು-ಪಾರು ತಿಂಡಿಗೆ ಗುಂಪು ಗುಂಪಾಗಿ ಬರುತ್ತಿದ್ದವು. ಕಾಂಕ್ರೀಟ್ ಕಾಡಿನಿಂದ ಸ್ವಲ್ಪ ದೂರವಿರುವ ಕಾರಣ ಗುಬ್ಬಿಗಳು ಇನ್ನು ಅಲ್ಲಿ ಉಳಿದುಕೊಂಡಿವೆ!!
ಈ ವರ್ಷದ ಬೇಸಿಗೆಯಲ್ಲಿ ನಮ್ಮ ಕುಟುಂಬ ಬೆಂಗಳೂರಿನ ಶ್ರೀನಗರದಿಂದ ಕೆಂಗೇರಿ ಉಪನಗರದ ಬಳಿ ಇರುವ ವಿಶ್ವೇಶ್ವರಯ್ಯ ಬಡಾವಣೆಗೆ ಮನೆ ಬದಲಾಯಿಸಿದೆವು. ಆಗ ಪುನಃ ಕಂಡದ್ದು-ಕೇಳಿದ್ದು, ಗುಬ್ಬಿಗಳು ಹಾಗು ಅದರ "ಚೀಂವ್ ಚೀಂವ್"!! ಇದು ಹೊಸ ಬಡಾವಣೆಯಾದ್ದರಿಂದ ಮನೆಗಳು ಸ್ವಲ್ಪ ಕಡಿಮೆ. ಸುತ್ತಮುತ್ತ ಕೆಲವು ತರಕಾರಿ ತೋಟಗಳು ಹಾಗು ಹಣ್ಣು-ಹುಳಗಳಿರುವ ಪೊದೆಗಳು ಸಾಕಷ್ಟಿವೆ.
ನಶಿಸುತ್ತಿರುವ ಇವುಗಳ ರಕ್ಷಣೆಗೆ ನನ್ನಿಂದಾಗುವ ಅಲ್ಪ ಸಹಾಯ ಮಾಡಲು ಯೋಚಿಸಿದೆ. ಮನೆಯ ಆವರಣದ ಗೋಡೆಯ ಮೇಲೆ ಹಾಗು ಅಂಗಳದಲ್ಲಿ ಅಕ್ಕಿ ಕಾಳುಗಳನ್ನು ಇಡಲು ಪ್ರಾರಂಭಿಸಿದೆ. ತುಂಬಾ ಸೂಕ್ಷ್ಮ ಹಾಗು ಜಾಗರೂಕ ಜೀವಿಯಾದ ಇವುಗಳು, ಪ್ರಾಯಶಃ ಮನುಷ್ಯ ಭಯ ಅಥವಾ ಇನ್ನಾವುದೋ ಕಾರಣದಿಂದ ಮೊದಲ ಒಂದು ತಿಂಗಳು ಮನೆಯ ಆವರಣದ ಒಳಗೆ ಒಂದೂ ಸುಳಿಯಲಿಲ್ಲ. ನಂತರದ ದಿನಗಳಲ್ಲಿ ೨-೩ ಗುಬ್ಬಿಗಳು ಕಾಳನ್ನು ತಿನ್ನುವ ಧೈರ್ಯತೋರಿದವು. ಇದರಿಂದ ಉತ್ತೇಜಿತನಾಗಿ ಇನ್ನೂ ಹೆಚ್ಚು ಕಾಳುಗಳನ್ನು ಇಡಲು ಶುರುವಿಟ್ಟೆ. ಈಗೀಗ ೧೦-೧೫ ಗುಬ್ಬಿಗಳ ದೊಡ್ಡ ಗುಂಪು ಕಾಳನ್ನು ತಿನ್ನಲು ಬರುತ್ತಿವೆ. ಹಾಕಿದ ಕಾಳುಗಳನ್ನು ಒಂದೂ ಬಿಡದೆ ಸ್ವಾಹ ಮಾಡುತ್ತಿವೆ! ಬೆಳಗ್ಗಿನಿಂದ ಸಂಜೆಯವರಗೂ ಅಗ್ಗಾಗ್ಗ "ಚೀಂವ್ ಚೀಂವ್" ನಾದ ಕಿವಿಗೆ ಬೀಳುತ್ತಿರುತ್ತದೆ. ಮನೆಮಂದಿಗೆಲ್ಲ ಇದರಿಂದ ಸಖತ್ ಖುಷಿ. ಈಗ ಅಕ್ಕಿ ಕಾಳಿನ ಜೊತೆ ತಟ್ಟೆಯಲ್ಲಿ ನೀರು ಸಹ ಇಡುತ್ತಿದ್ದೇನೆ. ಸಂಜೆ ಕಚೇರಿಯಿಂದ ಹಿಂತಿರುಗಿದ ನಂತರ ಕಾಳುಗಳನ್ನು ಹಾಕುವುದು ನನ್ನ ದಿನಚರಿಯ ಒಂದು ಭಾಗವಾಗಿದೆ!
ನನ್ನ ಗಮನಕ್ಕೆ ಬಂದ ಒಂದು ವಿಷಯ. ೩ ರೀತಿಯ ಅಕ್ಕಿ ಕಾಳುಗಳನ್ನು ಹಾಕಿದ್ದೆ - ಅನ್ನಕ್ಕೆ ಬಳಸುವ ಸೋನಾಮಸೂರಿ, ಗಂಜಿಗೆ ಬಳಸುವ ಕೊಚ್ಚಿಲಕ್ಕಿ (ಕೆಂಪು ಅಕ್ಕಿ) ಹಾಗು ದೋಸೆಗೆ ಬಳಸುವ ಅಕ್ಕಿ. ಇವುಗಳಲ್ಲಿ ದೋಸೆಗೆ ಬಳಸುವ ಅಕ್ಕಿಯನ್ನು ಬೇಗನೆ ತಿಂದು ಮುಗಿಸುತ್ತವೆ. ಬಹುಶಃ ಈ ಮೂರರಲ್ಲಿ ದೋಸೆ ಅಕ್ಕಿ ಮೆದುವಿರುವ ಕಾರಣವೇನೂ!!
ಇವುಗಳ ಒಂದು ಫೋಟೋ ತೆಗೆಯಲು ಬಹಳ ದಿನಗಳಿಂದ ಪ್ರಯತ್ನಿಸುತ್ತಿದ್ದೆ. ಕ್ಯಾಮೆರಾ ಹಿಡಿದು ನಾ ಹೊರ ಬಂದರೆ ಸಾಕು, ಪುರ್ರನೆ ರೆಕ್ಕೆ ಬಡಿದು ಹಾರಿ ಬಿಡುತ್ತಿದ್ದವು. ಅಂತೂ ಇಂತೂ ಮರೆಯಲ್ಲಿ ಕಾದು ನಿಂತು ಕ್ಲಿಕ್ಕಿಸಿದ ಒಂದೆರಡು ಚಿತ್ರಗಳನ್ನು ಇಲ್ಲಿ ಕೊಟ್ಟಿದ್ದೇನೆ.
ಓದುಗರಲ್ಲಿ ಒಂದು ವಿನಂತಿ - ಬೆಂಗಳೂರಿನಂತಹ ಮಹಾನಗರದಲ್ಲಿ ಇಂದು ಪಕ್ಷಿಗಳು ಕಡಿಮೆಯಾಗಲು ಮುಖ್ಯ ಕಾರಣ ಅವುಗಳಿಗೆ ಸರಿಯಾದ ಆಹಾರ ದೊರಕದೆ ಇರುವುದು ಹಾಗು ಅವುಗಳ ವಾಸಸ್ಥಾನವಾದ ಗಿಡ-ಮರಗಳ ಮಾರಣಹೋಮ. ನಿಮ್ಮ ಮನೆಯ ಸುತ್ತ ಯಾವುದೇ ಪಕ್ಷಿಗಳು ಕಂಡರೂ, ಮನೆಯ ಅಂಗಳ ಹಾಗು ಛಾವಣಿಯಲ್ಲಿ ಅವುಗಳಿಗೆ ಸ್ವಲ್ಪ ಕಾಳು-ನೀರು ಇಟ್ಟು ಅವುಗಳ ರಕ್ಷಣೆಗೆ ನಿಮ್ಮ ಕಿಂಚಿತ್ ಕೊಡುಗೆ ನೀಡಿ. ನಿಮ್ಮ ಮನೆಯ ಸುತ್ತ ಸ್ಥಳಾವಕಾಶವಿದ್ದರೆ ಹೂವು ಹಣ್ಣು ಬಿಡುವಂತಹ ಗಿಡಗಳನ್ನು ಬೆಳೆಸಿ. ಆ ಗಿಡಗಳಲ್ಲಿ ದೊರೆಯುವ ಹುಳಗಳನ್ನು ತಿನ್ನಲಾದರು ಪಕ್ಷಿಗಳು ಬರುತ್ತವೆ.
ಉತ್ತಮ ಲೇಖನ ಸರ್.
ReplyDeleteನಮ್ಮ ಮನೆಯ ಸುತ್ತಲೂ ಹೆಚ್ಚಿನ ಗಿಡಗಳನ್ನು ಬೆಳೆಸಿರುವುದರಿಂದ ಕಾಗೆ-ಕೋಗಿಲೆಗಳು ಆಗಾಗ ಬರುತ್ತಿರುತ್ತವೆ. ನಾವು ಅವಕ್ಕಾಗಿ ಇಡುವ ನೀರನ್ನು ಅಳಿಲುಗಳೂ ಸಹ ಕುಡಿಯುತ್ತವೆ. ಆದರೆ, ಗುಬ್ಬಚ್ಚಿಗಳು ಮಾತ್ರ ನಮ್ಮ ಮನೆಯ ಸುತ್ತಲೆಲ್ಲೂ ಕಾಣಸಿಗುವುದಿಲ್ಲ. ಪರಿಸರ-ಪಕ್ಷಿಗಳ ಬಗೆಗಿನ ನಿಮ್ಮ ಕಾಳಜಿ ಸಂತಸ ತಂದಿದೆ :o)
ಧನ್ಯವಾದಗಳು ಪ್ರಶಾಂತ್ :-)
ReplyDelete